ಹೂಸ್ಟನ್ ನಲ್ಲಿ ಮನೆ ಮನೆಗೆ 'ಭಾರತೀಯ ವಿರೋಧಿ' ಕರಪತ್ರ
ಅಮೆರಿಕದ ಔದ್ಯೋಗಿಕ ವಲಯದಲ್ಲಿ ಅಮೆರಿಕನ್ನರಿಗೇ ಮೊದಲ ಆದ್ಯತೆ ಎಂದು ಅಲ್ಲಿನ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅಲ್ಲಿ ಭಾರತೀಯ ವಿರೋಧಿ ಚಟುವಟಿಕೆಗಳು ಗರಿಗೆದರಿವೆ.
ಹೂಸ್ಟನ್, ಫೆಬ್ರವರಿ 6: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕದ ಔದ್ಯೋಗಿಕ ವಲಯದಲ್ಲಿ ಅಮೆರಿಕದವರಿಗೇ ಮೊದಲ ಪ್ರಾಶಸ್ತ್ಯ ಎಂಬ ಘೋಷವಾಕ್ಯ ಮೊಳಗಿಸಿದ ಬೆನ್ನಲ್ಲೇ ಅಮೆರಿಕದೆಲ್ಲೆಡೆ ಭಾರತ ವಿರೋಧಿ ಚಟುವಟಿಕೆಗಳಿಗೆ ಹೆಚ್ಚಿನ ಬಲ ಬಂದಂತಾಗಿದೆ.
ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿನ ಫೋರ್ಟ್ ಬೆಂಡ್ ಜಿಲ್ಲೆಯಲ್ಲಿ ಮನೆ ಮನೆಗೆ ಕರ ಪತ್ರಗಳನ್ನು ಹಂಚಲಾಗಿದ್ದು, ಅದರಲ್ಲಿ ಭಾರತೀಯರನ್ನು ಅಮೆರಿಕದಿಂದ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಅಮೆರಿಕಾವೇ ಮೊದಲು ಎಂಬ ಧ್ಯೇಯ ವಾಕ್ಯದ ಗುಣಗಾನ ಮಾಡಿರುವ ಕರಪತ್ರ ಮುದ್ರಕರು, ಟ್ರಂಪ್ ಅವರ ಕನಸಿನಂತೆ ಹಳಿ ತಪ್ಪಿರುವ ಅಮೆರಿಕದ ಭವಿಷ್ಯವನ್ನು ಮತ್ತೆ ಸರಿ ಹಾದಿಗೆ ತರಬೇಕೆಂದರೆ ನಾವು ಮೊದಲು ಭಾರತೀಯರನ್ನು, ಮುಸ್ಲಿಮರನ್ನು, ಕಪ್ಪು ಜನಾಂಗದವರನ್ನು ಹಾಗೂ ಯದೂದಿಗಳನ್ನೂ ದೇಶದಿಂದ ಹೊರಗಟ್ಟಬೇಕಿದೆ ಎಂದು ಬರೆಯಲಾಗಿದೆ.
ಜಿಲ್ಲೆಯಲ್ಲಿ ಹೀಗೆ ಭಾರತೀಯ ವಿರೋಧಿ ಚಟುವಟಿಕೆಗಳು ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ದಿನವಾಗಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿರುವ ಭಾರತೀಯರು ಸೇರಿದಂತೆ ಕೆಲವಾರು ದಕ್ಷಿಣ ಏಷ್ಯಾ ಮೂಲದ ಪ್ರಜೆಗಳೂ ಇದ್ದು, ಅವರೆಲ್ಲರೂ ಭೀತಿಗೊಳಗಾಗಿದ್ದಾರೆಂದು ಜಿಲ್ಲಾಡಳಿತ ಬೇಸರ ವ್ಯಕ್ತಪಡಿಸಿದೆ. ಆದರೆ, ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಆಶ್ವಾಸನೆ ನೀಡಿದೆ.
ಆದರೂ, ಅಲ್ಲಿನ ಏಷ್ಯಾ ಮೂಲದ ಜನರು ಅಸಹನೆಯ ಬೇಗೆಯಲ್ಲಿ ತಮ್ಮ ಮುಂದಿನ ಜೀವನದ ಬಗ್ಗೆ ಆತಂಕಗೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.












Click it and Unblock the Notifications