Bihar Election 2025: ಅವಧಿಗೂ ಮೊದಲೇ ಬಿಹಾರ ಚುನಾವಣೆ, ಪ್ರತಿಪಕ್ಷಗಳು ಕಂಗಾಲು
ಪಾಟ್ನಾ, ಫೆಬ್ರವರಿ 23: ಈ ವರ್ಷ ಎರಡು ರಾಜ್ಯದ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದ್ದು, 27 ವರ್ಷಗಳ ಬಳಿಕ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ರಾಜ್ಯದಲ್ಲಿ ಸದ್ಯ ಎನ್‌ಡಿಎ ಮೈತ್ರಿಕೂಟದ ಆಡಳಿತವಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿಗಳು.
ಆದರೆ ಅವಧಿಗೂ ಮೊದಲೇ ಎನ್‌ಡಿಎ ಮೈತ್ರಿಕೂಟ ಬಿಹಾರ ಚುನಾವಣೆಗೆ ಹೋಗುವ ಸುಳಿವು ಸಿಕ್ಕಿದೆ. ಇದರಿಂದಾಗಿ ಪ್ರತಿಪಕ್ಷಗಳಿಗೆ ಸಂಕಷ್ಟ ಎದುರಾಗಿದೆ. ಅವಧಿಗೂ ಮೊದಲೇ ಬಿಹಾರ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟವೇ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಈಗಾಗಲೇ ಸಮೀಕ್ಷೆಗಳು ಅಂದಾಜಿಸಿವೆ.

ಬಿಹಾರದ ಸಚಿವ, ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ಚುನಾವಣೆ ಮುಂದಿಟ್ಟುಕೊಂಡು 'ಪ್ರಗತಿ ಯಾತ್ರೆ'ಯನ್ನು ನಡೆಸುತ್ತಿದ್ದಾರೆ.
ಸಚಿವರು ಹೇಳಿದ್ದೇನು?; ಸಚಿವ ವಿಜಯ್ ಕುಮಾರ್ ಚೌಧರಿ ಮಾತನಾಡಿ, "ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಗತಿ ಯಾತ್ರೆ ಪೂರ್ಣಗೊಳಿಸಿದ ಮರುದಿನವೇ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಲು ಎನ್‌ಡಿಎ ಮೈತ್ರಿಕೂಟ ಸಿದ್ಧವಾಗಿದೆ" ಎಂದು ಹೇಳಿದ್ದಾರೆ.
"ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಲು ಎನ್‌ಡಿಎ ಮೈತ್ರಿಕೂಟ ಸಿದ್ಧವಾಗಿದೆ. ಯಾವಾಗ ಚುನಾವಣೆ ನಡೆಸಬೇಕು ಎಂಬುದು ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು" ಎಂದು ವಿಜಯ್ ಕುಮಾರ್ ಚೌಧರಿ ತಿಳಿಸಿದ್ದಾರೆ.
ಈಗಾಗಲೇ ಬಿಹಾರದ ವಿರೋಧ ಪಕ್ಷಗಳು ರಾಜ್ಯದಲ್ಲಿ ಅವಧಿಗೂ ಮೊದಲೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದವು. ಫೆಬ್ರವರಿ 24ರಂದು ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ ಅಲ್ಲದೇ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಜೆಟ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಜೆಡಿಯು ಅಧಿಕಾರದಲ್ಲಿರುವ ಬಿಹಾರಕ್ಕೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದರು.
ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ ಎಂಬ ಆರೋಪವಿದೆ. ಇದರ ನಡುವೆಯೇ ರಾಜ್ಯದಲ್ಲಿ ಅವಧಿಗೂ ಮೊದಲೇ ಚುನಾವಣೆ ನಡೆಯುವ ಸೂಚನೆ ಸಿಕ್ಕಿದೆ. ವೇಳಾಪಟ್ಟಿ ಪ್ರಕಾರ ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಬೇಕಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ 'ಪ್ರಗತಿ ಯಾತ್ರೆ' ನಡೆಯುತ್ತಿದೆ. 38 ಜಿಲ್ಲೆಗಳಲ್ಲಿ ಸಂಚಾರ ನಡೆಸಿರುವ ಈ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎನ್‌ಡಿಎ ಪರವಾದ ಅಲೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಪ್ರತಿಪಕ್ಷಗಳು ಎನ್‌ಡಿಎ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಬಿಟ್ಟರೆ ಬೇರೆ ನಾಯಕರು ಇಲ್ಲ ಎಂದು ಟೀಕಿಸಿದೆ.
70 ಸದಸ್ಯ ಬದಲ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48, ಎಎಪಿ 22 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯ ಸೀಟು ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದೆ. ದೆಹಲಿ ಚುನಾವಣೆ ಗೆದ್ದ ಉತ್ಸಾಹದಲ್ಲಿರುವ ಬಿಜೆಪಿ ಬಿಹಾರದಲ್ಲಿ ಅವಧಿ ಪೂರ್ಣ ಚುನಾವಣೆಗೆ ಹೋಗುವ ನಿರೀಕ್ಷೆ ಇದೆ.
2024ರ ಜನವರಿ 28ರಂದು ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 9ನೇ ಬಾರಿಗೆ ನಿತೀಶ್ ಕುಮಾರ್ ರಾಜ್ಯದ ಮುಖ್ಯಂತ್ರಿಯಾದರು. ಹೊಸ ದಾಖಲೆಯನ್ನು ಸಹ ಬರೆದರು.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ 'ಇಂಡಿಯಾ' ಮೈತ್ರಿಕೂಟದಿಂದ ಹೊರಬಂದರು. 'ಮಹಾಘಟಬಂಧನ್' ಸರ್ಕಾರ ಪತನಗೊಂಡಿತು. ಬಿಜೆಪಿ ಸಖ್ಯವನ್ನು ತೊರೆದಿದ್ದ ಅವರು 18 ತಿಂಗಳ ಬಳಿಕ ಮತ್ತೆ ಎನ್‌ಡಿಎ ಮೈತ್ರಿಕೂಟವನ್ನು ಸೇರಿ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು.












Click it and Unblock the Notifications