ಇಂಡಿಯಾ V/s ಎನ್‌ಡಿಎ: ಲೋಕಸಭಾ ಫಲಿತಾಂಶದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಡಿಕೆ ಶಿವಕುಮಾರ್!
ಲಕ್ನೋ, ಮೇ. 17: ಮೇ 20 ರಂದು ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಉತ್ತರ ಪ್ರದೇಶದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಲೋಕಸಭಾ ಚುನಾವಣಾ ಫಳಿತಾಂಶದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಪ್ರಬಲ ನಾಯಕ ಡಿಕೆ ಶಿವಕುಮಾರ್ ಶುಕ್ರವಾರ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಚುನಾವಣಾ ಭವಿಷ್ಯ ಕುರಿತು ದೊಡ್ಡ ಹೇಳಿಕೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಜನರ ಮನೋಭಾವ ಬದಲಾಗಿದ್ದು, ಫಲಿತಾಂಶ ಯಾವ ರೀತಿಯಲ್ಲಿ ಬರಲಿದೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಇಂಡಿಯಾ V/s ಎನ್‌ಡಿಎ: ಯಾವ ಬಣಕ್ಕೆ ಎಷ್ಟು ಸ್ಥಾನ?
ಚುನಾವಣಾ ಭವಿಷ್ಯ ನುಡಿದಿರುವ ಡಿಕೆ ಶಿವಕುಮಾರ್, ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ ಸುಮಾರು 300 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸುಮಾರು 200 ಸ್ಥಾನಗಳನ್ನು ಪಡೆಯಲಿದೆ ಎಂದು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
"ಇಂಡಿಯಾ ಒಕ್ಕೂಟವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಹೊಂದಿದೆ. ಇಂಡಿಯಾ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಲು ಒಟ್ಟಾಗಿ ಬರಲಿದೆ. ಇಂಡಿಯಾ ಮೈತ್ರಿಕೂಟವು ಸುಮಾರು 300 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಎನ್‌ಡಿಎ 200 ರ ಆಸುಪಾಸಿನ ಸ್ಥಾನಗಳನ್ನು ಪಡೆಯುತ್ತದೆ. ನಾವು ಸಾಮೂಹಿಕ ನಾಯಕತ್ವವನ್ನು ನಂಬುತ್ತೇವೆ. ನಾವು ಚುನಾವಣೆಯಲ್ಲಿ ಗೆದ್ದು, ಸರ್ಕಾರವನ್ನು ರಚಿಸುತ್ತೇವೆ. ಚರ್ಚೆ ಮಾಡಿ ನಾಯಕತ್ವವನ್ನು ಆಯ್ಕೆ ಮಾಡುತ್ತೇವೆ" ಎಂದು ಶಿವಕುಮಾರ್ ಮಾಧ್ಯಮಗಳಿಗೆ ನೀಡಿದ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.

ಈ ಸಮೀಕ್ಷೆಗಳಲ್ಲಿ ಎನ್‌ಡಿಎ ಸಾಧನೆಯನ್ನು ಹೇಗೆ ನೋಡುತ್ತೀರಿ ಎಂಬ ಪ್ರಶ್ನೆಗೆ, ಎನ್‌ಡಿಎ ಸುಮಾರು 200 ಸ್ಥಾನಗಳನ್ನು ಪಡೆಯಬಹುದು. ಇಂಡಿಯಾ ಬ್ಲಾಕ್ 300 ಪ್ಲಸ್ ಸೀಟುಗಳನ್ನು ಪಡೆಯಲಿದೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಎರಡಂಕಿ ಕೂಡ ದಾಟುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮನಮೋಹನ್ ಸಿಂಗ್ ಆಯ್ಕೆ ನೆನಪಿಸಿಕೊಂಡ ಡಿಕೆಶಿ
2004 ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಡಾ ಮನಮೋಹನ್ ಸಿಂಗ್ ಅವರನ್ನು ಭಾರತದ ಪ್ರಧಾನಿಯಾಗಿ ಹೇಗೆ ಆಯ್ಕೆ ಮಾಡಲಾಯಿತು ಎಂಬ ವಿಷಯವನ್ನು ಡಿಕೆ ಶಿವಕುಮಾರ್ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಎಲ್ಲಾ ಸಂಸದರು ಸೋನಿಯಾ ಗಾಂಧಿ ಪ್ರಧಾನಿ ಆಗಬೇಕೆಂದು ಬಯಸಿದ್ದರು. ಆದರೆ, ಅವರು ಬೇರೆ ರೀತಿಯಲ್ಲಿ ನಿರ್ಧಾರ ತೆಗೆದುಕೊಂಡರು ಎಂದಿದ್ದಾರೆ.
"ಈ ಹಿಂದೆಯೂ ಯುಪಿಎ ಬಂದಾಗ ಸಾಮೂಹಿಕ ನಾಯಕತ್ವದಲ್ಲಿಯೇ ಇತ್ತು. ಇಡೀ ದೇಶದ ಸಂಸತ್ ಸದಸ್ಯರು ಸೋನಿಯಾ ಗಾಂಧಿ ಈ ದೇಶದ ಪ್ರಧಾನಿಯಾಗಬೇಕೆಂದು ನಿರ್ಧರಿಸಿದರು. ಅವರೆಲ್ಲರೂ ಅಲ್ಪಸಂಖ್ಯಾತರಾಗಿದ್ದ ರಾಷ್ಟ್ರಪತಿ ಅಬ್ದುಲ್ ಕಲಾಂಜಿಗೆ ಪತ್ರವನ್ನು ನೀಡಿದರು. ಆದರೆ, ಸೋನಿಯಾ ಗಾಂಧಿಯವರು ರಾಷ್ಟ್ರಪತಿಗಳನ್ನು ಭೇಟಿಯಾಗಿ ಅರ್ಥಶಾಸ್ತ್ರಜ್ಞರಾಗಿರುವ ಡಾ ಮನಮೋಹನ್ ಸಿಂಗ್ ಅವರು ದೇಶವನ್ನು ಉಳಿಸಲು ಭಾರತದ ಪ್ರಧಾನಿಯಾಗಬೇಕೆಂದು ನಿರ್ಧರಿಸಿದರು" ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಒಂದೇ ಒಂದು ಭರವಸೆ ಈಡೇರಿಸಿಲ್ಲ!
ಈ ಚುನಾವಣೆಯ ಜನರಿಗೆ ಲಾಭವಾಗಿದೆಯೇ, ಅವರ ಜೀವನ ಸುಧಾರಿಸಿದೆಯೇ ಎಂಬ ವಿಷಯಗಳ ಮೇಲೆ ಈ ಚುನಾವಣೆ ನಡೆಯುತ್ತಿದೆ. ಬಿಜೆಪಿ ಬರೀ ಭರವಸೆಗಳನ್ನು ನೀಡುತ್ತದೆ. ಆದರೆ, ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. ನಾವು ಹೇಳಿದ್ದನ್ನು ಜನರಿಗೆ ನೀಡಿದ್ದೇವೆ. ಕರ್ನಾಟಕದಲ್ಲಿಯೂ ಬಿಜೆಪಿ ನೀಡಿದ ಭರವಸೆಗಳನ್ನು ಜಾರಿಗೆ ತಂದಿಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಪ್ರಸ್ತುತ ಐದನೇ ಹಂತದ ಮತದಾನಕ್ಕೆ ದೇಶ ಸಿದ್ಧವಾಗುತ್ತಿದೆ. ಏಳು ಹಂತಗಳ ಮತದಾನದ ಬಳಿಕ ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.












Click it and Unblock the Notifications