ಮೋದಿ ಸರ್ಕಾರಕ್ಕೆ ಟೈಂ ಬೇಕು: ಮಾಜಿ ಪಿಎಂ ಸಿಂಗ್
ನವದೆಹಲಿ, ಜು 29 (ಪಿಟಿಐ): ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಹೊಸ ಸರ್ಕಾರಕ್ಕೆ ಕಾಲಾವಕಾಶ ನೀಡಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ನರೇಂದ್ರ ಮೋದಿ ಸರಕಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳುವುದು ಸಹಜ. ಬೆಲೆ ಏರಿಕೆ, ಹಣದುಬ್ಬರ ಮುಂತಾದ ಕ್ಲಿಷ್ಟ ಸಮಸ್ಯೆಗಳನ್ನು ಹತೋಟಿಗೆ ತರಲು ಹೊಸ ಸರಕಾರಕ್ಕೆ ನಾವೂ ಕಾಲಾವಕಾಶ ನೀಡ ಬೇಕಾಗುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಮನಮೋಹನ್ ಸಿಂಗ್, ಉತ್ತರ ಪ್ರದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ಕೋಮು ಘರ್ಷಣೆಯನ್ನು ಹತ್ತಿಕ್ಕಲು ಅಖಿಲೇಶ್ ಯಾದವ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮನೆಯಲ್ಲಿ ಅಡಗಿಸಲಾಗಿದೆ ಎಂದು ಹೇಳಲಾಗುವ ಮೈಕ್ರೋಫೋನ್ ಕುರಿತು ಮಾತನಾಡಿದ ಸಿಂಗ್, ಇದು ಇಡೀ ನಮ್ಮ ವ್ಯವಸ್ಥೆಗೇ ಸವಾಲಾಗಿರುವ ವಿಚಾರ. ಸರಕಾರ ಈ ಬಗ್ಗೆ ಸದನದಲ್ಲಿ ಉತ್ತರ ನೀಡಬೇಕೆಂದು ಎಂದು ಸಿಂಗ್ ಒತ್ತಾಯಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮಾರ್ಖಾಂಡೇಯ ಕಾಟ್ಜು ಆರೋಪದ ಬಗ್ಗೆ ಮಾತನಾಡಿದ ಸಿಂಗ್, ಕಾಟ್ಚು ಆರೋಪ ನಿರಾಧಾರ. ಈಗಾಗಲೇ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಈ ಇಫ್ತಾರ್ ಕೂಟದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಲ್ಲದೇ, ಲಾಲೂ ಪ್ರಸಾದ್ ಯಾದವ್, ಶರದ್ ಯಾದವ್, ತಾರಿಕ್ ಅನ್ವರ್ ಮುಂತಾದವರೂ ಭಾಗವಹಿಸಿದ್ದರು.












Click it and Unblock the Notifications