ಬಿಜೆಪಿ ಬೆಂಕಿಗೆ ತುಪ್ಪ ಸುರಿಯುತ್ತಿದೆ: ಎನ್‌ಸಿಪಿ!
ಮುಂಬೈ: ಶರದ್ ಪವಾರ್ ಪಕ್ಷದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಎನ್‌ಸಿಪಿ ಮುಖಂಡ ಅಜಿತ್ ಪವಾರ್ (ajit pawar) ಬಿಜೆಪಿಗೆ ಜಂಪ್ ಆಗ್ತಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದ ತಕ್ಷಣ ಎನ್‌ಸಿಪಿ ಮುಖಂಡರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ಬಿಜೆಪಿ ಬೆಂಕಿಗೆ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸಿದೆ ಎನ್‌ಸಿಪಿ.
ಶರದ್ ಪವಾರ್ (sharad pawar) ನೇತೃತ್ವದ ಎನ್‌ಸಿಪಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಆದರೆ ಇದೇ ಪಕ್ಷದಲ್ಲಿರುವ ಮತ್ತೊಬ್ಬ ಪ್ರಬಲ ನಾಯಕ ಅಜಿತ್ ಪವಾರ್ ಮತ್ತೆ ಬಿಜೆಪಿ ಜೊತೆ ಕೈಜೋಡಿಸುತ್ತಾರೆಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಅಜಿತ್ ಪವಾರ್, ನನ್ನ ಜೀವ ಇರುವವರೆಗೂ ಎನ್‌ಸಿಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಹೇಳಿಕೆ ಹೊರಬಿದ್ದ ಮರುದಿನವೇ ಎನ್‌ಸಿಪಿ ಮುಖಂಡರು ಬಿಜೆಪಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಈ ವಿಚಾರವಾಗಿ ಮಾತನಾಡುತ್ತಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೆಸರನ್ನೂ ಎಳೆದು ತಂದಿದ್ದಾರೆ. 'ನಿಮ್ಮ ಹಾಗೂ ಶಿವಸೇನೆ ಮೇಲೆ ಏಕೆ ಇಷ್ಟೊಂದು ಒತ್ತಡ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯನ್ನು ಕೇಳಿ' ಎಂದು ಸವಾಲು ಹಾಕಿದ್ದಾರೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಎನ್‌ಸಿಪಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಅಜಿತ್ ಪವಾರ್ ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ ನಡೆಸಿದ್ದಾರೆ.
'ಸಭೆ ನಡೆಸಿಲ್ಲ, ಸಹಿ ಪಡೆದಿಲ್ಲ'
ಇನ್ನು ತಾವು ಎನ್‌ಸಿಪಿ ತೊರೆದು ಬಿಜೆಪಿ ಸೇರುವ ಬಗ್ಗೆ ಅಜಿತ್ ಪವಾರ್ ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದಾರೆ. 'ಮಾಧ್ಯಮಗಳು ವಿನಾಕಾರಣ ವದಂತಿ ಹರಡುತ್ತಿವೆ' ಎಂದು ಆರೋಪಿಸಿದ್ದರು. ಹಾಗೇ 'ವದಂತಿಯಲ್ಲಿ ಹುರುಳಿಲ್ಲ, ನಾನು ಎನ್‌ಸಿಪಿಯಲ್ಲಿ ಇದ್ದೇನೆ ಮತ್ತು ಇದೇ ಪಕ್ಷದಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು. ಮತ್ತೊಂದು ಕಡೆ ಎನ್‌ಸಿಪಿ ಕಾರ್ಯಕರ್ತರು ಈ ಬಗ್ಗೆ ಗೊಂದಲಕ್ಕೆ ಒಳಗಾಗುವ ಅಗತ್ಯತೆ ಇಲ್ಲ' ಎಂದು ಖಡಕ್ ಆಗಿ ತಿಳಿಸಿದ್ದರು ಕೂಡ ಅಜಿತ್ ಪವಾರ್ ಬಿಜೆಪಿ ಸೇರ್ಪಡೆ ವದಂತಿಗೆ ಬ್ರೇಕ್ ಬಿದ್ದಿಲ್ಲ.
ಕಾಂಗ್ರೆಸ್ & ಎನ್‌ಸಿಪಿ ಸ್ನೇಹ!
ಶರದ್ ಪವಾರ್ ಅತ್ತ ರಾಹುಲ್ ಗಾಂಧಿ ಜೊತೆ ಕೈಜೋಡಿಸಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸುವ ಸಂದರ್ಭದಲ್ಲೇ ಇಂತಹ ಸುದ್ದಿ ಹಬ್ಬಿದೆ. ಅಜಿತ್ ಪವಾರ್ ಕೂಡ ಎನ್‌ಸಿಪಿ ಪಕ್ಷದಲ್ಲಿ ಶರದ್ ಅವರಷ್ಟೇ ಪ್ರಭಾವ ಹೊಂದಿರುವ ಮುಖಂಡ. ಹೀಗಾಗಿ ಯಾವ ಸಮಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಮಾತು ತಜ್ಞರದ್ದು, ಅಕಸ್ಮಾತ್ ಅಜಿತ್ ಪವಾರ್ ಹೀಗೆ ಬಿಜೆಪಿ ಸೇರಿದರೆ ಮಹಾರಾಷ್ಟ್ರದಲ್ಲಿ ಇದು ಭಾರಿ ಪರಿಣಾಮ ಬೀರಲಿದೆ. ಅದರಲ್ಲೂ ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲು ಆಗುವುದು ಪಕ್ಕಾ.

ಅನುಮಾನಕ್ಕೆ ಕಾರಣ ಏನು?
4 ಬಾರಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದಿದ್ದ 63 ವರ್ಷದ ಅಜಿತ್ ಪವಾರ್, ಮಹಾರಾಷ್ಟ್ರ ವಿಧಾನಸಭೆಯ ವಿರೋಧಪಕ್ಷದ ನಾಯಕನೂ ಹೌದು. ಆದರೆ ಈಗ ಇಂತಹ ಊಹಾಪೋಹ ಅಜಿತ್ ಪವಾರ್ ವಿಚಾರದಲ್ಲಿ ಹುಟ್ಟಿಕೊಳ್ಳಲು ಬಲವಾದ ಕಾರಣವಿದೆ. ಏಕೆಂದರೆ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಇದೇ ಅಜಿತ್ ಬಿಜೆಪಿ ಜೊತೆ ಸೇರಿದ್ದರು.
2019ರಲ್ಲಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರವಾಗಿ ಶಿವಸೇನೆ ಮತ್ತು ಬಿಜೆಪಿ ನಡುವೆ ಸಂಘರ್ಷ ಶುರು ಆದಾಗ ಉದ್ಧವ್ ಠಾಕ್ರೆ ಎನ್‌ಡಿಎಗೆ ಗುಡ್‌ಬೈ ಹೇಳಿ ಬೇರೆ ದಾರಿ ಹಿಡಿದರು. ಈ ವೇಳೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಜೊತೆ ಸೇರಿದ್ದರು ಅಜಿತ್ ಪವಾರ್. ಅಲ್ಲದೆ ಕೆಲ ಶಾಸಕರ ಸಹಿ ಸಂಗ್ರಹಿಸಿದ್ದರು. ಹೀಗಾಗಿಯೇ ಈಗ ಮೂಡಿರುವ ಅನಮಾನ ನಿಜವಾಗುತ್ತಾ ಎನ್ನುತ್ತಿದ್ದಾರೆ ರಾಜಕೀಯ ನಿಪುಣರು.
ಬಿದ್ದು ಹೋಗಿತ್ತು ಸರ್ಕಾರ!
ಹೀಗೆ ಅಜಿತ್ ಪವಾರ್ ಎನ್‌ಸಿಪಿ ಶಾಸಕರ ಸಹಿ ಸಂಗ್ರಹಿಸುವ ಜೊತೆಗೆ ಬಿಜೆಪಿ-ಎನ್‌ಸಿಪಿ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ ಈ ಮೈತ್ರಿ ಸರ್ಕಾರ 80 ಗಂಟೆ ಕಳೆಯುವ ಮೊದಲೇ ಮರೆಯಾಗಿ ಹೋಗಿತ್ತು. ಇನ್ನೊಂದು ಕಡೆ ಉದ್ಧವ್ ಠಾಕ್ರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಅಗ ಎನ್‌ಸಿಪಿಗೆ ಮರಳಿ ಬಂದಿದ್ದ ಅಜಿತ್ ಪವಾರ್, ಡಿಸಿಎಂ ಹುದ್ದೆಯನ್ನೂ ಮತ್ತೆ ಗಿಟ್ಟಿಸಿಕೊಂಡರು. ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದ ಕಾರಣಕ್ಕೆ ಮತ್ತೆ ಅನುಮಾನ ಮೂಡಿದೆ.












Click it and Unblock the Notifications