ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ: ನಾಸಾ ಮೆಚ್ಚುಗೆ
ಕೊಯಮತ್ತೂರು, ಆಗಸ್ಟ್ 31: ಇಡೀ ಜಗತ್ತು ಭಾರತದತ್ತ ಕುತೂಹಲ, ಮೆಚ್ಚುಗೆಯಿಂದ ನೋಡುತ್ತಿದೆ. ಹೆಮ್ಮೆಯ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆ ತನ್ನ ಗುರಿ ತಲುಪುವ ದಿನ ಸಮೀಪಿಸುತ್ತಿದೆ.
ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಶೋಧನಾ ನೌಕೆಯೊಂದು ಇಳಿಯುತ್ತಿದೆ. ಜಗತ್ತಿನ ಯಾವ ಬಾಹ್ಯಾಕಾಶ ಸಂಸ್ಥೆಯೂ ಮಾಡದ ಸಾಧನೆ ಇದು. ಇದನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದ್ದು, ದಕ್ಷಿಣ ಧ್ರುವದ ಮೇಲೆ ನೌಕೆ ಯಶಸ್ವಿಯಾಗಿ ಇಳಿಯಲು ಎಂದು ಬಯಸಿದ್ದಾರೆ ಎಂಬುದಾಗಿ ನಾಸಾದ ಮಾಜಿ ಗಗನಯಾನಿ ಡೊನಾಲ್ಡ್ ಎ ಥಾಮಸ್ ಶುಕ್ರವಾರ ಹೇಳಿದರು.
ಚಂದ್ರಯಾನ 2: ಕ್ಯಾಮರಾ ಕ್ಲಿಕ್ಕಿಸಿದ ಚಂದ್ರನ ಹೊಸ ಚಿತ್ರ
ತಮಿಳುನಾಡಿನ ಕೊಯಮತ್ತೂರು ಸಮೀಪದ ಪಾರ್ಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

ಚಂದ್ರಯಾನದ ಮೇಲೆ ನಾಸಾ ಕಣ್ಣು
''ಈ ಯೋಜನೆ ಬಗ್ಗೆ ನಾಸಾ ಅಪಾರ ಆಸಕ್ತಿ ಹೊಂದಿದೆ. ಏಕೆಂದರೆ ನಾಸಾವು ಐದು ವರ್ಷದ ಬಳಿಕ ತನ್ನ ಗಗನಯಾತ್ರಿಕರನ್ನು ಚಂದ್ರನ ಇದೇ ಭಾಗದಲ್ಲಿ ಇಳಿಸುವ ಯೋಜನೆ ರೂಪಿಸಿದೆ. ಹೀಗಾಗಿ ಚಂದ್ರನ ಈ ಭಾಗದ ಮೇಲ್ಮೈ ಯಾವ ರೀತಿ ಇದೆ, ಅಲ್ಲಿ ಇರುವ ಖನಿಜಗಳು ಹಾಗೂ ರಾಸಾಯನಿಕಗಳು ಮತ್ತು ಹಿಮದ ಅಸ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಕಾತರವಾಗಿದೆ'' ಎಂದು ತಿಳಿಸಿದರು.

ನಾಸಾದಿಂದ ಹೊಸ ರಾಕೆಟ್
''ನಾಸಾ ಮಾತ್ರವಲ್ಲ, ಇಡೀ ಜಗತ್ತೇ ಚಂದ್ರಯಾನ-2 ನೌಕೆಯು ಚಂದ್ರನ ಕುರಿತು ಕಂಡುಕೊಳ್ಳುವ ಸಂಗತಿಗಳನ್ನು ತಿಳಿಯಲು ಆಸಕ್ತವಾಗಿದೆ'' ಎಂದು ಹೇಳಿದರು.
''ನಾಸಾವು ಪ್ರಸ್ತುತ ಸ್ಪೇಸ್ ಲ್ಯಾಂಡಿಂಗ್ ಸಿಸ್ಟಂ ಎಂಬ ಹೊಸ ರಾಕೆಟ್‌ಅನ್ನು ಸಿದ್ಧಪಡಿಸುತ್ತಿದೆ. ಇದರ ಪರೀಕ್ಷಾರ್ಥ ಪ್ರಯೋಗ ಒಂದು ವರ್ಷದಲ್ಲಿ ನಡೆಯಲಿದೆ. ಇಲ್ಲಿಂದ ಮೂರು ವರ್ಷಗಳಲ್ಲಿ ಗಗನಯಾತ್ರಿಗಳು ಚಂದ್ರನ ಸುತ್ತ ಸುತ್ತಲಿದ್ದಾರೆ. ಐದು ವರ್ಷಗಳಲ್ಲಿ ಚಂದ್ರನ ಮೇಲೆ ಇಳಿಯಲಿದ್ದಾರೆ. ಇದರಲ್ಲಿ ಮಹಿಳೆ ಮತ್ತು ಪುರುಷರು ಇಬ್ಬರೂ ಇರಲಿದ್ದಾರೆ'' ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಪ್ರಧಾನಿ ಜೊತೆ ಚಂದ್ರಯಾನ ನೋಡಲಿರುವ ರಾಶಿ ಇವಳೇ!

ಚಂದ್ರನಿಗೆ ಮತ್ತಷ್ಟು ಹತ್ತಿರ
ಚಂದ್ರಯಾನ-2 ನೌಕೆಯು ಚಂದ್ರನ ಸುತ್ತಲಿನ ಮತ್ತೊಂದು ಕಕ್ಷೆಯ ಒಳಪ್ರವೇಶಿಸಿದೆ. ಈ ಮೂಲಕ ಚಂದ್ರನಿಗೆ ಮತ್ತಷ್ಟು ಸಮೀಪಿಸಿದೆ. ನೌಕೆಯನ್ನು ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ಇಸ್ರೋ ಶುಕ್ರವಾರ ಯಶಸ್ವಿಯಾಗಿದೆ. 124*164 ಕಕ್ಷೆಯೊಳಗೆ ಚಂದ್ರಯಾನ ನೌಕೆ ಸಾಗಿದೆ.

ನಾಲ್ಕನೆಯ ಯಶಸ್ವಿ ಕಾರ್ಯಾಚರಣೆ
ಶುಕ್ರವಾರ ಸಂಜೆ 6.18ಕ್ಕೆ ಆರಂಭವಾದ ಕಕ್ಷೆಗೆ ಸೇರಿಸುವ ಕಾರ್ಯವು 19.25 ನಿಮಿಷಗಳಲ್ಲಿ ಪೂರ್ಣಗೊಂಡಿತು. ಇದು ನಾಲ್ಕನೆಯ ಕಕ್ಷೆ ಸೇರ್ಪಡೆಯಾಗಿದೆ. ಇನ್ನು ಒಂದು ಕಕ್ಷೆ ಸೇರ್ಪಡೆಯ ಸವಾಲು ಮಾತ್ರ ಬಾಕಿ ಉಳಿದಿದೆ. ನೌಕೆಯ ಎಲ್ಲ ಚಟುವಟಿಕೆಗಳೂ ಸಹಜವಾಗಿವೆ. ಮುಂದಿನ ಹಾಗೂ ಕೊನೆಯ ಕಕ್ಷಾ ಕಾರ್ಯಾಚರಣೆಯು ಸೆ. 1ರಂದು ಸಂಜೆ 6-7 ಗಂಟೆಯ ನಡುವೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.