ಮನ್ ಕೀ ಬಾತ್: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ, ಮೇ 28: ಕೇಂದ್ರ ಸರಕಾರ ಮೂರು ವರ್ಷಗಳನ್ನು ಪೂರೈಸಿದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್'ನಲ್ಲಿ ಮಾತನಾಡಿದರು. ಅಂದ ಹಾಗೆ ಇದು ಅವರ 32ನೇ ಮನ್ ಕೀ ಬಾತ್.
ಮನ್ ಕೀ ಬಾತ್ ಆರಂಭಿಸಿದ ಪ್ರಧಾನಿ ಮೋದಿ ಮುಸ್ಲಿಂ ಬಾಂಧವರಿಗೆ ರಂಜಾನಿನ ಶುಭಾಶಯಗಳನ್ನು ಹೇಳಿದರು. ನಂತರ ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ರನ್ನು ಸ್ಮರಿಸಿದರು. ಜತೆಗೆ ವಿಶ್ವ ಪರಿಸರ ದಿನ, ಯೋಗ ದಿನದ ಬಗ್ಗೆಯೂ ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದರು.[ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು]
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್'ನ್ನು ದಕ್ಷಿಣ ದೆಹಲಿಯ ಆರ್.ಕೆ ಪುರಂನ ಸ್ಲಂ ನಿವಾಸಿಗಳೊಂದಿಗೆ ಆಲಿಸಿದರು. ಪ್ರಧಾನಿ ಮನ್ ಕೀ ಬಾತ್ ನ ಮುಖ್ಯಾಂಶಗಳು ಇಲ್ಲಿವೆ.

ರಂಜಾನ್ ಶುಭಾಶಯ
ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಮುಸ್ಲಿಂ ಬಾಂಧವರಿಗೆ ರಂಜಾನಿನ ಶುಭಾಶಯಗಳನ್ನು ತಿಳಿಸಿದರು. ನಂತರ ಮಾತನಾಡಿದ ಧಾರ್ಮಿಕ ವೈವಿಧ್ಯಕ್ಕೆ ಭಾರತದ ದೊಡ್ಡ ಉದಾಹರಣೆ. ಭಾರತದಂಥ ದೇಶದಲ್ಲಿ ಎಲ್ಲಾ ಧರ್ಮಗಳ ಜನ ಸ್ವತಂತ್ರವಾಗಿ ಬದುಕಬಹುದು ಎಂದು ಹೇಳಿದರು.

ಪರಿಸರ ಸ್ವಚ್ಛವಾಗಿಡಿ
ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ಜೂನ್ 5 ವಿಶ್ವ ಪರಿಸರ ದಿನ. ಭೂಮಿ ತಾಯಿ ಇದ್ದ ಹಾಗೆ ನಾವೆಲ್ಲಾ ಭೂಮಿಯ ಮಕ್ಕಳು. ನಮ್ಮ ಸುತ್ತಲಿನ ಪರಿಸರದಲ್ಲಿ ವಿಶೇಷವಾದ ಶಕ್ತಿ ಇದೆ. ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿದ್ದೇ ಇದಕ್ಕೆ ಉದಾಹರಣೆ. ನಾವು ನಮ್ಮ ಪರಿಸರದ ಜತೆ ಸಂಪರ್ಕ ಬೆಳೆಸಿಕೊಳ್ಳಬೇಕು. ನಾವು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಚೆನ್ನಾಗಿ ನೋಡಿಕೊಳ್ಳಬೇಕು," ಎಂದು ಸಲಹೆ ನೀಡಿದರು.[ಮೋದಿಯವರ 'ಮನ್ ಕಿ ಬಾತ್' ಪುಸ್ತಕದ ರೂಪದಲ್ಲಿ]
|
ವೀರ ಸಾವರ್ಕರ್ ಸ್ಮರಣೆ
"ಇವತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹುಟ್ಟಿದ ದಿನವೂ ಹೌದು. ದೇಶಕ್ಕೆ ಅವರ ಕೊಡುಗೆ ಅಪಾರವಾದುದು. ಜೈಲಿನಲ್ಲಿ ಕಳೆದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯುವಕರು ತಿಳಿದುಕೊಳ್ಳುತ್ತಿರುವುದು ನಿಜವಾಗಿಯೂ ಉತ್ತಮ ಬೆಳವಣಿಗೆ," ಎಂದು ನರೇಂದ್ರ ಮೋದಿ ಹೇಳಿದ್ದಾರೆ.
"ವೀರ ಸಾವರ್ಕರ್ ಕಾಲ ಪಾನಿ (ಕರಿ ನೀರು) ಶಿಕ್ಷೆಗೆ ಗುರಿಯಾಗಿದ್ದರು. ಅವತ್ತು ಭಾರತದಾದ್ಯಂತ ಜನರು ಜೈಲು ಸೇರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಅವರೇ ಬರೆದ ಪುಸ್ತಕ ಅವರ ಜೈಲಿನ ದಿನಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ," ಎಂದು ಪ್ರಧಾನಿ ಹೇಳಿದ್ದಾರೆ.

ಕಂಫರ್ಟ್ ಝೋನಿನಿಂದ ಹೊರ ಬಂದ ಯುವಕರು
"ಕಳೆದ ಬಾರಿಯ ಮನ್ ಕೀ ಬಾತ್ ನಲ್ಲಿ ನಾನು ರಜೆಯಲ್ಲಿ ನಿಮ್ಮ ಕಂಫರ್ಟ್ ಝೋನಿನಿಂದ ಹೊರ ಬನ್ನಿ. ಹೊಸತನ್ನು ಮಾಡಿ ಎಂದು ಯುವಕರಿಗೆ ಕರೆಕೊಟ್ಟಿದ್ದೆ. ನನ್ನ ಸಲಹೆಯನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೊಸ ಹೊಸ ವಿಚಾರಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಹಲವರು ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ," ಎಂದು ಪ್ರಧಾನಿ ಹೇಳಿದರು.
|
ಮೂರು ತಲೆಮಾರಿನ ಯೋಗಕ್ಕೆ ಮೋದಿ ಕರೆ
"ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ನೀವೆಲ್ಲಾ ಈ ಯೋಗ ದಿನದಲ್ಲಿ ಪಾಲ್ಗೊಳ್ಳುವಂತೆ ಕೋರುತ್ತೇನೆ. ಯೋಗ ನಮಗೆ ಆರೋಗ್ಯದ ಜತೆಗೆ ದೈಹಿಕ ದೃಢತೆಯನ್ನೂ ನೀಡುತ್ತದೆ. ಇವತ್ತು ಯೋಗ ಇಡೀ ವಿಶ್ವವನ್ನೇ ಒಂದು ಮಾಡಿದೆ. ವಿಶ್ವಕ್ಕೆ ಭಾರತ ಕೊಟ್ಟಿರುವ ಮಹತ್ವದ ಕೊಡುಗೆ ಯೋಗ," ಎಂದು ಪ್ರಧಾನಿ ಬಣ್ಣಿಸಿದರು.
ಮುಂದುವರಿದು ಮಾತನಾಡಿದ ಅವರು, "ಈ ಬಾರಿಯದು ಮೂರನೇ ಯೋಗ ದಿನ. ಈ ದಿನದಂದು ಮೂರೂ ತಲೆಮಾರಿನವರು ಒಟ್ಟಾಗಿ ಯಾಕೆ ಯೋಗ ಮಾಡಬಾರದು? ನಾನು ಮೂರು ತಲೆಮಾರಿನ ಜನ ಒಟ್ಟಾಗಿ ಯೋಗ ಮಾಡುತ್ತಿರುವ ಚಿತ್ರಗಳನ್ನು ಜನರಿಂದ ಅಪೇಕ್ಷಿಸುತ್ತೇನೆ. ಜೂನ್ 1ರಿಂದ ಜೂನ್ 21ರವರಗೆ ಪ್ರತಿದಿನ ಯೋಗದ ಟ್ವೀಟ್ ಮಾಡಲಾಗುವುದು," ಎಂದು ಅವರು ಹೇಳಿದ್ದಾರೆ.

ಕ್ರಿಯಾತ್ಮಕ ಟೀಕೆಗಳು ಅಗತ್ಯ
ನಮ್ಮ ಕೆಲಸಗಳನ್ನು ಜನರು ತುಂಬಾ ವಿವರವಾಗಿ ವಿಶ್ಲೇಷಣೆ ಮಾಡುತ್ತಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ. ಕ್ರಿಯಾತ್ಮಕ ಟೀಕೆ ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ. ಎಚ್ಚರದಿಂದಿರುವ ಸಮಾಜದಲ್ಲಿ ಕ್ರಿಯಾತ್ಮಕ ಟೀಕೆಗಳು ಅಗತ್ಯವಾಗಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
|
ಸ್ವಚ್ಛ ಭಾರತಕ್ಕೆ ಒತ್ತು
ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ವಿಚಾರವನ್ನು ಪ್ರಸ್ತಾಪಿಸಿದರು. ಸ್ವಚ್ಛ ಭಾರತದ ವಿಚಾರಲ್ಲಿ ಭಾರತ ಸರಿಯಾದ ದಿಕ್ಕಿನಲ್ಲಿ ಮುಂದಡಿ ಇಡುತ್ತಿದೆ. ಕಸ ವಿಲೇವಾರಿ ಮನೆಯಿಂದಲೇ ಆರಂಭವಾಗಬೇಕು. ಒಣ ಕಸ, ಹಸಿ ಕಸ, ಪ್ಲಾಸ್ಟಿಕ್ ಕಸ, ಪೇಪರ್ ಮತ್ತು ಲೋಹದ ಕಸ ಹಾಗೂ ಮರು ಬಳಕೆ ಮಾಡುವ ಕಸಗಳನ್ನು ಬೇರೆ ಬೇರೆಯಾಗಿ ವಿಲೇವಾರಿ ಮಾಡಬೇಕು ಎಂದದು ಪ್ರಧಾನಿ ಜನರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಮೋದಿ ಮುಂಬೈ ವರ್ಸೋವಾ ಬೀಚ್ ಸ್ವಚ್ಛಗೊಳಿಸಿದ ಅಫ್ರೋಜ್ ಶಾ ಮತ್ತು ತಂಡವನ್ನು ಅಭಿನಂದಿಸಿದರು. ಜತೆಗೆ ಮನ್ ಕೀ ಬಾತ್ ಪುಸ್ತಕಕ್ಕೆ ಯುಎಇ ಮೂಲದ ಚಿತ್ರಕಲಾವಿದ ಅಕ್ಬರ್ ಸಾಹೇಬ್ ಯಾವುದೇ ಹಣ ಪಡೆದುಕೊಳ್ಳದೆ ಚಿತ್ರ ಬಿಡಿಸಿಕೊಟ್ಟಿದ್ದಕ್ಕೆ ಪ್ರಧಾನಿ ಧನ್ಯವಾದ ಹೇಳಿದರು












Click it and Unblock the Notifications