ಕಾಂಗ್ರೆಸ್ ಕೇವಲ ಮೊಸಳೆ ಕಣ್ಣೀರು ಸುರಿಸುತ್ತದೆ: ಮೋದಿ
ಮಿರ್ಜಾಪುರ, ಜುಲೈ 15: ಎಂದಿನಂತೆ ಕಾಂಗ್ರೆಸ್ ಸರ್ಕಾರದ ಮೇಲೆ ಟೀಕೆಗಳ ಮಳೆ ಸುರಿಸಿದ ನರೇಂದ್ರ ಮೋದಿ 'ಕಾಂಗ್ರೆಸ್ ಪಕ್ಷ 50 ವರ್ಷದಲ್ಲಿ ಮಾಡಲಾಗದ್ದನ್ನು ನಾವು ಕೇವಲ 5 ವರ್ಷದಲ್ಲಿ ಮಾಡಿದ್ದೇವೆ' ಎಂದು ಬೆನ್ನುತಟ್ಟಿಕೊಂಡರು.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬನ್‌ಸಾಗರ್ ಕಾಲುವೆ ಯೋಜನೆ ಉದ್ಘಾಟಿಸಿ, ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ಇಷ್ಟು ವರ್ಷ ಏಕೆ ಅವರ ಬಗ್ಗೆ ಗಮನ ಹರಿಸಲಿಲ್ಲ ಎಂದು ಪ್ರಶ್ನಿಸಿದರು.
ರೈತರ ಮೇಲೆ ಕಾಳಜಿ ಇದ್ದಿದ್ದರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದಿರಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿಧಾನ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಮೇಲೆ ಹರಿಹಾಯ್ದರು.

ಕಾಂಗ್ರೆಸ್ ಪಕ್ಷ ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಲ್ಲೂ ಅರ್ಧಂಬರ್ಧ ಯೋಜನೆಗಳನ್ನು ಮಾಡಿಟ್ಟಿದೆ. ಇದರಿಂದ ಜನರ ಹಣ ವ್ಯರ್ಥವಾಗಿದೆ, ಸಮಯ ವ್ಯರ್ಥವಾಗಿದೆ. ಈಗ ಎನ್‌ಡಿಎ ಸರ್ಕಾರ ಎಲ್ಲಾ ಯೋಜನೆಗಳನ್ನು ಮುಗಿಸುತ್ತಿದೆ ಎಂದು ಅವರು ಹೇಳಿದರು.
ಬನ್‌ಸಾಗರ್ ಕಾಲುವೆ ಯೋಜನೆಯಿಂದ ನೀರು ಪಡೆಯುವ ಎಲ್ಲಾ ರೈತರು ಹನಿ ನೀರಾವರಿ ಬಳಸಿ ನೀರು ಉಳಿಸುವಂತೆ ಮೋದಿ ಮನವಿ ಮಾಡಿದರು. ಜೊತೆಗೆ ಹನಿ ನೀರಾವರಿ ಪದ್ಧತಿಯ ಅವಶ್ಯಕತೆಯ ಬಗ್ಗೆಯೂ ಮಾಹಿತಿ ನೀಡಿದರು.












Click it and Unblock the Notifications