ನರೇಂದ್ರ ಮೋದಿ ಸರ್ಕಾರದ ಸೆಂಚುರಿ ಹೈಲೈಟ್ಸ್
ಬೆಂಗಳೂರು, ಸೆ. 2 : ಭಾರತಕ್ಕೆ ಒಳ್ಳೆ ದಿನಗಳು ಬರುತ್ತವೆ ಎಂದು ಹೇಳಿಕೊಂಡೇ ಇಡೀ ದೇಶಾದ್ಯಂತ ಮೋಡಿ ಮಾಡಿ ಅಧಿಕಾರದ ಗದ್ದುಗೆ ಏರಿದ್ದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸೆಂಚುರಿ ಹೊಡೆದಿದೆ.
ಕ್ಯಾಬಿನೆಟ್ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲೇ ಸೂಕ್ಷ್ಮತೆ ತೋರಿದ್ದ ನರೇಂದ್ರ ಮೋದಿ ಚಿಕ್ಕ ಮತ್ತು ಚೊಕ್ಕ ಸಂಪುಟಕ್ಕೆ ಆದ್ಯತೆ ನೀಡಿದ್ದು ಗೊತ್ತೆ ಇದೆ. ಕಳಂಕಿತರನ್ನು ಸಂಪುಟದಿಂದ ಹೊರಗಿಟ್ಟು ಪಾರದರ್ಶಕ ಆಡಳಿತ ನೀಡುವ ಇರಾದೆಯನ್ನು ಅಂದೇ ವ್ಯಕ್ತಪಡಿಸಿದ್ದರು.
ಯುಪಿಎ ಸರ್ಕಾರ ಭರ್ತಿ 10 ವರ್ಷ ಆಡಳಿತ ನಡೆಸಿ ಅಧಿಕಾರದಿಂದ ಕೆಳಗಿಳಿದಿತ್ತು. ದೇಶದ ಜನ ನರೇಂದ್ರ ಮೋದಿಗೆ ಜತೆಗೆ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದರು. ಒಂದೆಡೆ ಏರುತ್ತಿರುವ ಹಣದುಬ್ಬರ, ಕುಸಿಯುತ್ತಿದ್ದ ರೂಪಾಯಿ, ಪ್ರತಿದಿನ ಹೆಚ್ಚುತ್ತಿದ್ದ ಪಾಕಿಸ್ತಾನದ ಕೀಟಲೆ, ಚೀನಾ ಗಟಿ ತಕರಾರು ಇದೆಲ್ಲದರ ನಡುವೆ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಿದ್ದರು.(ಎರಡು ವರ್ಷದಲ್ಲೇ ಅತಿಹೆಚ್ಚಿನ ಜಿಡಿಪಿ ಸಾಧನೆ)
ಸಚಿವ ಸಂಪುಟ ಪ್ರಮಾಣವಚನಕ್ಕೆ ಪಕ್ಕದ ಶ್ರೀಲಂಕಾ, ಪಾಕಿಸ್ತಾನದ ಮುಖ್ಯಸ್ಥರನ್ನು ಆಮಂತ್ರಿಸಿದಾಗಲೇ ಇತರ ದೇಶಗಳೊಂದಿಗೆ ಬಾಂಧವ್ಯ ವೃದ್ಧಿಸುವ ಸೂಚನೆ ನೀಡಿದ್ದರು. ಅನೇಕ ಏಳು ಬೀಳುಗಳ ನಡುವೆ ನೂರು ದಿನ ಪೂರೈಸಿರುವ ಮೋದಿ ಸರ್ಕಾರ ಸಾಧನೆಗಳ ಪಕ್ಷಿ ನೋಟ ನಿಮಗಾಗಿ...

ಕಪ್ಪು ಹಣ ವಾಪಸ್ ತರುವ ಮೊದಲ ಹೆಜ್ಜೆ
ವಿದೇಶದ ಬ್ಯಾಂಕ್ ಗಳಲ್ಲಿ ಭದ್ರವಾಗಿರುವ ದೇಶದ ಕಪ್ಪು ಹಣ ವಾಪಸ್ ತರುವ ಪ್ರಯತ್ನವಾಗಿ ವಿಶೇಷ ತನಿಖಾ ದಳ ರಚನೆ ಮಾಡಲಾಗಿದೆ. ನ್ಯಾಯಾಧೀಶ ಎಂ.ಬಿ.ಷಾ ಅವರನ್ನು ಇದಕ್ಕೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಹಣದುಬ್ಬರ ತಡೆಗೆ ಕ್ರಮ
ಹಣದುಬ್ಬರ ತಡೆವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಪರಿಣಾಮವೇ ಜಿಡಿಪಿ ದರ 5.7ಕ್ಕೆ ಏರಿದೆ. ಅಲ್ಲದೇ ಡಾಲರ್ ಎದುರು ಪಾತಾಳ ಕಂಡಿದ್ದ ರೂಪಾಯಿ ಚೇತರಿಕೆ ನಗೆ ಬೀರಿದೆ. ಇದರೊಂದಿಗೆ ಶೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆಯ ಹಾದಿಯಲ್ಲೇ ಸಾಗಿವೆ.

ಡಿಜಿಟಲ್ ಇಂಡಿಯಾ
ನಗರಗಳಿಗೆ ಸೀಮಿತವಾಗಿರುವ ಆಧುನಿಕ ತಂತ್ರಜ್ಞಾನವನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಯೋಜನೆ ಹಾಕಿಕೊಂಡ ನರೇಂದ್ರ ಮೋದಿ ದೇಶದ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಡಿಜಿಟಲ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ವಿದೇಶಿ ಬಾಂಧವ್ಯ ವೃದ್ಧಿ
ಪ್ರಧಾನಿಯಾದ ತಕ್ಷಣ ಮೋದಿ ಪ್ರಪ್ರಥಮವಾಗಿ ಆದ್ಯತೆ ನೀಡಿದ್ದೇ ವಿದೇಶಿ ಬಾಂಧವ್ಯ ವೃದ್ಧಿಗೆ. ಅದರಂತೆ ನೆರೆಯ ಚೀನಾ, ಭೂತಾನ್‌ಗೆ ಭೇಟಿ ನೀಡಿದರು. ದಕ್ಷಿಣ ಆಫ್ರಿಕಾ ಮತ್ತು ರಷ್ಯಾಕ್ಕೂ ಭೇಟಿ ನೀಡಿ ವಿದೇಶಿ ವ್ಯವಹಾರ ಸುಧಾರಣೆಗೆ ಶ್ರಮಿಸಿದರು. ಸದ್ಯ ಜಪಾನ್ ಪ್ರವಾಸದಲ್ಲಿದ್ದಾರೆ.

ಮೂಡಿಬಂದ ಬಜೆಟ್‌ಗಳು
ದೇಶದ ಸಮಗ್ರ ಅಭಿವೃದ್ಧಿ ಗುರಿಯಾಗಿಸಿಕೊಂಡು ಮೂಡಿಬಂದ ರೈಲ್ವೆ ಮತ್ತು ಹಣಕಾಸು ಬಜೆಟ್ ಅನೇಕ ಪ್ರಗತಿಪರ ಕೆಲಸಗಳಿಗೆ ನಾಂದಿ ಹಾಡಿತು. ರೈಲ್ವೆ ವಿಭಾಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ಗೆ ಏರಿಸಿದ್ದು ಬಜೆಟ್ ಹೈಲೈಟ್ಸ್.

ಜನಧನ ಯೋಜನೆ
ದೇಶದ ಎಲ್ಲ ನಾಗರಿಕರಿಗೆ ಬ್ಯಾಂಕ್ ಖಾತೆ ನೀಡುವ ಉದ್ದೇಶದಿಂದ ಜಾರಿಯಾದ ಜನಧನ ಯೋಜನೆ ದೇಶದ ಇತಿಹಾಸದಲ್ಲೆ ಮೈಲುಗಲ್ಲು. ಕೇವಲ ಮೇಲ್ವರ್ಗದವರಿಗೆ ಮೀಸಲಿದ್ದ ಬ್ಯಾಂಕಿಂಗ್ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಸುವುದು ಇದರ ಗುರಿ. ಒಂದೇ ದಿನ 1.5ಕೋಟಿ ಬ್ಯಾಂಕ್ ಖಾತೆ ತೆರೆದಿದ್ದು ಯೋಜನೆಗೆ ಜನ ನೀಡಿದ ಸ್ಪಂದನೆಗೆ ಸಾಕ್ಷಿ.

ಸ್ವಚ್ಛತೆಗೆ ಆದ್ಯತೆ
ಸ್ವತಃ ಸ್ವಾತಂತ್ರ್ಯೋತ್ಸವದ ಭಾಷಣದಲ್ಲೆ ನರೇಂದ್ರ ಮೋದಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣ ಕುರಿತು ಮಾತನಾಡಿದ್ದರು. ಇದಕ್ಕೆ ಪೂರಕವೆಂಬಂತೆ ಅನೇಕ ಕಾರ್ಪೋರೇಟ್ ಕಂಪನಿಗಳು ದೇಶದ ಗ್ರಾಮೀಣ ಶಾಲಾ ಕಾಲೇಜುಗಳಿಗೆ ಶೌಚಾಲಯ ನಿರ್ಮಿಸಿಕೊಡಲು ಮುಂದೆ ಬಂದಿವೆ

ಸಮಗ್ರ ಅಭಿವೃದ್ಧಿ ಚಿಂತನೆ
ಅತ್ಯಾಧುನಿಕ ಯುದ್ಧನೌಕೆ ವಿಕ್ರಮಾದಿತ್ಯ ಲೋಕಾರ್ಪಣೆ, ಉಪಗ್ರಹಗಳ ಯಶಸ್ವಿ ಉಡಾವಣೆ, ಪೆಟ್ರೋಲ್ ದರ ಇಳಿಕೆ, ಆಹಾರ ವಸ್ತುಗಳ ಮೇಲಿಮ ಸುಂಕ ತಗ್ಗಿಸಿದ್ದು, ಸರ್ಕಾರದ ಯೋಜನೆಗಳಲ್ಲಿ ಎಲ್ಲರೂ ಭಾಗಿಯಾಗಲು 'ಮೈ ಗೌವರ್ನ್‌ಮೆಂಟ್' ಅಂತರ್ಜಾಲ ತಾಣ...ಈ ರೀತಿ ಅನೇಕ ಕಾರ್ಯಕ್ರಮಗಳು ಕಣ್ಣಿಗೆ ಕಾಣಿಸುತ್ತಿವೆ.

ಗಂಗಾನದಿಗೆ ಪುನರ್‌ಜೀವ
ದೇಶದ ನಾಗರಿಕತೆ ಪ್ರತೀಕ, ಉತ್ತರ ಭಾರತದ ಜೀವನದಿ ಗಂಗೆಯನ್ನು ಸ್ವಚ್ಛಮಾಡಲು ಮೋದಿ ತೋರಿರುವ ಇಚ್ಛಾಶಕ್ತಿ ಎಂಥವರನ್ನು ಬೆರಗು ಮಾಡುತ್ತದೆ. 2,525 ಕಿಲೋ ಮೀಟರ್ ಉದ್ದದ ಗಂಗಾ ನದಿ ಶುದ್ದೀಕರಣಕ್ಕೆ 2,747.52 ಕೋಟಿ ರೂ. ಮೀಸಲಿಡಲಾಗಿದ್ದು ಎರಡು ಹಂತದಲ್ಲಿ ನಡೆಯಲಿದೆ. ಯೋಜನೆ ಜವಾಬ್ದಾರಿಯನ್ನು ಸ್ವತಃ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ವಹಿಸಿಕೊಂಡಿದ್ದಾರೆ












Click it and Unblock the Notifications