ಆಂಧ್ರದಲ್ಲಿ ಯಾವ ಭಾಷೆಯಾದ್ರೂ ಮಾತಾಡಿ, ನಿಮ್ಮಿಷ್ಟದಂತೆ ಇರಿ: ಬೆಂಗಳೂರು ಕಂಪನಿಗಳಿಗೆ ಸಚಿವ ಆಫರ್
ಸಿಲಿಕಾನ್ ಸಿಟಿ, ಐಟಿ ಸಿಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರನ್ನು ಕಂಡರೆ ಪಕ್ಕದ ಆಂಧ್ರಪ್ರದೇಶಕ್ಕೆ ಕಣ್ಣು ಕುಕ್ಕುತ್ತಿದೆ. ಅಲ್ಲದೆ ಕರ್ನಾಟಕದ ವಿಚಾರವನ್ನು ಮುಂದಿಟ್ಟುಕೊಂಡು ತನ್ನ ಲಾಭಕ್ಕೆ ಬಳಸಿಕೊಳ್ಳುವ ಕುತಂತ್ರ ರೂಪಿಸುತ್ತಿದೆ. ಕರ್ನಾಟಕದಲ್ಲಿ ಭಾಷಾ ವಿಚಾರವಾಗಿ ದಶಕಗಳಿಂದಲೂ ಜಟಾಪಟಿ ಇದೆ. ಉದ್ಯೋಗ ಅರಸಿ ಬೆಂಗಳೂರಿನಲ್ಲಿ ತುಂಬಿಕೊಂಡಿರುವ ಪರಭಾಷಿಕರು ಹೆಚ್ಚಾಗಿ ಕನ್ನಡ ಕಲಿಯುತ್ತಿಲ್ಲ ಎಂಬ ವಾದ ಮೊದಲಿನಿಂದಲೂ ಇದೆ. ಆದರೆ ಪಕ್ಕದ ಆಂಧ್ರ ಸರ್ಕಾರ ಇದನ್ನೇ ಬಂಡವಾಳ ಮಾಡಿಕೊಂಡು ನೀವು ಯಾವುದಾದರೂ ಭಾಷೆ ಮಾತನಾಡಿಕೊಳ್ಳಿ, ಬನ್ನಿ ಆಂಧ್ರಕ್ಕೆ ಎಂದು ಕಂಪನಿಗಳಿಗೆ ಆಹ್ವಾನ ಕೊಡುತ್ತಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಬೆಂಗಳೂರಿಗೆ ಸೆಡ್ಡು ಹೊಡೆಯಲು ಕಂಪನಿಗಳಿಗೆ ಓಪನ್ ಆಫರ್ ಕೊಟ್ಟಿದ್ದಾರೆ.
ಇತ್ತೀಚೆಗೆ ಕರ್ನಾಟಕದ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ಗೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಅದನ್ನು ಕೈಬಿಟ್ಟಿತ್ತು. ಆಗಲೂ ನಾರಾ ಲೋಕೇಶ್, ನೀವೆಲ್ಲ ಆಂಧ್ರಕ್ಕೆ ಬನ್ನಿ, ಬೆಂಗಳೂರಿಗೆ ಸಮೀಪದಲ್ಲೇ ಇರುವ ಆಂಧ್ರಪ್ರದೇಶದ ಗಡಿಯಲ್ಲೇ ನಿಮಗೆ ಎಲ್ಲ ಸೌಕರ್ಯ ಕೊಡ್ತೀವಿ, ಅಲ್ಲಿಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತೀವಿ ಎಂದು ಏರೋಸ್ಪೇಸ್ ಉದ್ಯಮಿಗಳಿಗೆ ಓಪನ್ ಆಫರ್ ನೀಡಿದ್ದರು. ಇದಕ್ಕೆ ಕರ್ನಾಟಕ ಕೂಡ ಸರಿಯಾಗಿ ಟಕ್ಕರ್ ಕೊಟ್ಟಿತ್ತು. ಏರೋಸ್ಪೇಸ್ ಪಾರ್ಕ್‌ಗೆ ನಮ್ಮಲ್ಲೇ ಒಳ್ಳೆಯ ಜಾಗ ಇದೆ. ಅದನ್ನು ನಾವೇ ಕೊಡ್ತೀವಿ ಎಂದು ನಾರಾಗೆ ಟಾಂಗ್ ಕೊಟ್ಟಿತ್ತು. ಇದೀಗ ನಾರಾ ಕರ್ನಾಟಕದ ವಿಚಾರವನ್ನೇ ಮುಂದಿಟ್ಟುಕೊಂಡು ಮತ್ತೊಂದು ತಂತ್ರ ಹೆಣೆಯುತ್ತಿದ್ದಾರೆ.

ಬೆಂಗಳೂರಿನ ಭಾಷಾ ಗಲಾಟೆಯೇ ಅಸ್ತ್ರ!
ಕನ್ನಡದಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿ ಕನ್ನಡಿಗರೊಂದಿಗೆ ಕಿರಿಕ್ ಕೂಡ ಹೆಚ್ಚಾಗಿ ಮಾಡಿಕೊಳ್ಳುತ್ತಾರೆ. ನಾವು ಕನ್ನಡ ಮಾತಾಡಲ್ಲ, ನೀವೇ ಹಿಂದಿ, ತೆಲುಗು, ಮಲಯಾಳಿ ಭಾಷೆಗಳನ್ನ ಮಾತನಾಡಿ ಎಂದು ಜೋರು ಮಾಡುತ್ತಾರೆ. ಕೆಲವರು ಇದೇ ಕಾರಣಕ್ಕೆ ಬೆಂಗಳೂರು ಬಿಟ್ಟು ಹೋಗ್ತೀವಿ ಎಂದು ಉತ್ತರನ ಪೌರುಷ ತೋರುತ್ತಿರುತ್ತಾರೆ. ಈಗ ಇದನ್ನೇ ಆಂಧ್ರ ಸಚಿವ ನಾರಾ ಲೋಕೇಶ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ನೀವು ಯಾವ ಭಾಷೆಯಾದರೂ ಮಾತನಾಡಿ, ನಿಮ್ಮಿಷ್ಟದ ಬಟ್ಟೆಗಳನ್ನು ಹಾಕಿ, ನಿಮ್ಮಿಷ್ಟದಂತೆ ಇರಿ ಎಂದು ಸ್ವಾಗತ ಕೋರಿದ್ದಾರೆ.
ಆಂಧ್ರಪ್ರದೇಶದ ಐಟಿ ಹಾಗೂ ಕೈಗಾರಿಕಾ ಸಚಿವರೂ ಆಗಿರುವ ನಾರಾ ಲೋಕೇಶ್ ಅವರು ಮಹೀಂದ್ರಾ ಗ್ರೂಪ್ ಅನ್ನು ರಾಜ್ಯದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸುವಂತೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಪ್ರತಿಯೊಂದು ಕೈಗಾರಿಕಾ ಕ್ಷೇತ್ರಕ್ಕಾಗಿ ವಿಶೇಷ ಪ್ಯಾಕೇಜ್‌ಗಳು, ಹೆಚ್ಚು ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದಾರೆ.
ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿದ ನಂತರ, ಲೋಕೇಶ್ ತಮ್ಮ ಟ್ವೀಟ್ ಮೂಲಕ "ನಿಮ್ಮ ಬಂಡವಾಳ ಹೂಡಿಕೆಯನ್ನು ಮತ್ತಷ್ಟು ಸದೃಢಗೊಳಿಸಲು ಕಾಯುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪನೆ ಪರಿಗಣಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಕಾರ್ಮಿಕರಿಗೆ ಅತ್ಯುತ್ತಮ ವಾತಾವರಣ ಸಿಗುತ್ತದೆ. ಅವರು ತಮಗೆ ಇಷ್ಟದ ಭಾಷೆಯಲ್ಲಿ ಕೆಲಸ ಮಾಡಬಹುದು ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾತನಾಡದೆ ಮೊಂಡಾಟ ಮೆರೆಯುತ್ತಿರುವ ಬೆಂಗಳೂರಿನ ಕಂಪನಿಗಳನ್ನು ಈ ವಿಧಾನದ ಮೂಲಕ ಆಂಧ್ರಪ್ರದೇಶಕ್ಕೆ ಕರೆಸಿಕೊಳ್ಳಲು ಮಾಸ್ಟರ್‌ಪ್ಲ್ಯಾನ್ ಮಾಡಿದ್ದಾರೆ ನಾರಾ.












Click it and Unblock the Notifications