ಬೆಂಗಳೂರು-ಮೈಸೂರು-ಚೆನ್ನೈ ನಡುವೆ ಬುಲೆಟ್ ರೈಲು ಸಂಚಾರ: ಇಲ್ಲಿದೆ ಸಮಯ, ಮಾರ್ಗ, ಪ್ರಾರಂಭದ ದಿನಾಂಕದ ವಿವರ
Mysuru-Bengaluru-Chennai Bullet Train: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲು ಮಾರ್ಗವನ್ನು ವಿಸ್ತರಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಬೆಂಗಳೂರು-ಮೈಸೂರು-ಚೆನ್ನೈ ನಡುವಿನ ಪ್ರಯಾಣ ಅವಧಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ಬುಲೆಟ್ ರೈಲು ಓಡಿಸಲು ಯೋಜಿಸುತ್ತಿದೆ. ಹಾಗಾದ್ರೆ, ಇದು ಯಾವಾಗ ಟ್ರ್ಯಾಕ್‌ಗೆ ಇಳಿಯಲಿದೆ ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಕರ್ನಾಟಕ ಸೇರಿದಂತೆ ದೇಶದ ಹಲವೆಡ ವಂದೇ ಭಾರತ್ ಹೈಸ್ಪೀಡ್ ರೈಲು ಸಂಚಾರ ಮಾಡುತ್ತಿದೆ. ಇದೀಗ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು ಹಾಗೂ ಮೈಸೂರು ನಡುವಿನ ಪ್ರಯಾಣವನ್ನು ವೇಗವಾಗಿ ಮತ್ತು ಹೆಚ್ಚು ಅನುಕೂಲಕರ ಆಗಿಸಲು ಕೇಂದ್ರ ಸರ್ಕಾರ ಈ ಮಾರ್ಗದಲ್ಲಿ ಬುಲೆಟ್ ರೈಲು ಓಡಿಸಲು ಯೋಜನೆ ರೂಪಿಸಿದೆ.

ಚೆನ್ನೈ, ಬೆಂಗಳೂರು ಹಾಗೂ ಮೈಸೂರು ಮಾರ್ಗದಲ್ಲಿ 463 ಕಿಲೋ ಮೀಟರ್ ಹೈಸ್ಪೀಡ್ ರೈಲು ಮಾರ್ಗವು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಪ್ರಸ್ತುತ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ತಲುಪಲು ಸುಮಾರು 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಬುಲೈಟ್ ರೈಲು ಸಂಚಾರ ಆರಂಭ ಯಾವಾಗ?: ಆದರೆ, ಬುಲೆಟ್ ರೈಲು ಯೋಜನೆ ಪೂರ್ಣಗೊಂಡ ನಂತರ, ಮೈಸೂರಿನಿಂದ ಚೆನ್ನೈ ಪ್ರಯಾಣವು ಸುಮಾರು 2 ಗಂಟೆ 25 ನಿಮಿಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಯು 2051ರ ವೇಳೆಗೆ ಸಂಪೂರ್ಣವಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆಯು ಪ್ರಸ್ತುತ ತ್ವರಿತಗತಿಯಲ್ಲಿ ಪ್ರಗತಿಯಲ್ಲಿದೆ. ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈಗಾಗಲೇ ಸಾಮಾನ್ಯ ಜೋಡಣೆ ರೇಖಾಚಿತ್ರ, ಭೂ ಸಮೀಕ್ಷೆ, ಓವರ್ಹೆಡ್, ನೆಲ ಮತ್ತು ಭೂಗತ ಉಪಯುಕ್ತತೆಗಳ ಗುರುತಿಸುವಿಕೆ ಮತ್ತು ಸಬ್‌ಸ್ಟೇಷನ್‌ಗಳಿಗೆ ಅಗತ್ಯವಾದ ವಿದ್ಯುತ್ ಸಂಪರ್ಕಗಳನ್ನು ಪೂರ್ಣಗೊಳಿಸಿದೆ.
ಇದೀಗ ಭೂಸ್ವಾಧೀನ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ವೈಮಾನಿಕ ಸಮೀಕ್ಷೆ ಆರಂಭ ಆಗಲಿದೆ ಎಂದು ವರದಿಯಾಗಿದೆ. ವಿವರವಾದ ಯೋಜನಾ ವರದಿ ಸಿದ್ಧವಾದ ಬಳಿಕ ನಿಲ್ದಾಣಗಳ ನಿಖರವಾದ ಸ್ಥಳಗಳು, ದರಗಳು ಸೇರಿದಂತೆ ಇನ್ನಿತರೆಪ್ರಮುಖ ವಿವರಗಳನ್ನು ಅಂತಿಮ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಚೆನ್ನೈ - ಮೈಸೂರು ಮಾರ್ಗದ ವಿವರಗಳು: ಒಟ್ಟು ಉದ್ದ 463 ಕಿಲೋ ಮೀಟರ್ ಇರಲಿದ್ದು, ಕರ್ನಾಟಕ ಭಾಗದಲ್ಲಿ 258 ಕಿ.ಮೀ., ತಮಿಳುನಾಡಿನಲ್ಲಿ 132 ಕಿ.ಮೀ. ಇರಲಿದ್ದು, ಉಳಿದ ಪ್ರದೇಶ ಭಾಗದಲ್ಲಿ 73 ಕಿಲೋ ಮೀಟರ್ ಇರಲಿದೆ ಎಂದು ತಿಳಿದುಬಂದಿದೆ.
ಮಾರ್ಗ, ನಿಲ್ದಾಣಗಳ ವಿವರ: ಈ ಹೈಸ್ಪೀಡ್ ರೈಲು ಮಾರ್ಗವನ್ನು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಬಳಿ ಯೋಜಿಸಲಾಗಿದೆ. ಮುಖ್ಯ ಮಾರ್ಗವು ಬೆಂಗಳೂರಿನ ಬಳಿಯ ಹೊಸಕೋಟೆ ಮತ್ತು ಚೆನ್ನೈ ಬಳಿಯ ಶ್ರೀಪೆರಂಬುದೂರು ನಡುವೆ ಇರಲಿದೆ. ಅಲ್ಲದೆ, ಪರಂಥೂರು ಪ್ರದೇಶದ ಬಳಿಯೂ ಹಾದುಹೋಗುವ ಸಾಧ್ಯತೆ ಇದೆ. ಒಟ್ಟು 11 ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಪೂಂಟಮಲ್ಲಿ, ಅರಕ್ಕೋಣಂ, ಬಂಗಾರಪೆಟ್ಟೈ, ಚಿತ್ತೂರಿನಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದು ಹೋಗಲಿದೆ ಎಂದು ತಿಳಿಸಲಾಗಿದೆ.
ಪ್ರಯಾಣದ ಸಮಯ ಇಳಿಕೆ: ಚೆನ್ನೈನಿಂದ ಬೆಂಗಳೂರಿಗೆ ಒಟ್ಟು ಕಿಲೋ ಮೀಟರ್ 306 ಕಿ.ಮೀ. ಉದ್ದ ಇದ್ದು, ಬೆಂಗಳೂರು - ಮೈಸೂರು ಒಟ್ಟು ಕಿ.ಮೀ: 157 ಕಿ.ಮೀ. ಇದೆ. ರೈಲಿನ ಗರಿಷ್ಠ ವೇಗ ಗಂಟೆಗೆ 350 ಕಿಲೋ ಮೀಟರ್, ಸರಾಸರಿ ವೇಗ ಗಂಟೆಗೆ 250 ಕಿ.ಮೀಟರ್ ಇದ್ದು, ಇದು 750 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ರೈಲು ಆರಂಭವಾದ್ರೆ, ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣ ಸಮಯ 2 ಗಂಟೆ 25 ನಿಮಿಷಗಳಿಗೆ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತದೆ.












Click it and Unblock the Notifications