ಉಕ್ರೇನ್‌ನಲ್ಲಿ ನವೀನ್ ಸಾವಿಗೆ ರಾಹುಲ್ ಗಾಂಧಿ ಸಂತಾಪ
ಕೀವ್, ಮಾರ್ಚ್ 1: ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ್ ಸಾವಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
"ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ತನ್ನ ಪ್ರಾಣವನ್ನು ಕಳೆದುಕೊಂಡ ದುರಂತ ಸುದ್ದಿಯೊಂದು ಹೊರ ಬಿದ್ದಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು," ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
"ಈಗ ಪ್ರತಿಯೊಂದು ನಿಮಿಷವೂ ಅತ್ಯಮೂಲ್ಯವಾಗಿದೆ. ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದಕ್ಕೆ ಭಾರತೀಯ ಕೇಂದ್ರ ಸರ್ಕಾರವು ಸೂಕ್ತ ಕಾರ್ಯತಂತ್ರ ಯೋಜನೆಯನ್ನು ರೂಪಿಸಬೇಕು ಎಂದು ನಾನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ," ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಭಾರತೀಯನ ಸಾವಿನ ಕುರಿತು ಕೇಜ್ರಿವಾಲ್ ಆತಂಕ:
ಹಾವೇರಿ ಮೂಲದ ನವೀನ್ ಸಾವಿನ ಸುದ್ದಿಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದಾರೆ. "ಈ ಸುದ್ದಿ ಕೇಳಿ ಭಯವಾಗುತ್ತಿದೆ. ಅವರ ಕುಟುಂಬಕ್ಕಾಗಿ ಪ್ರಾರ್ಥಿಸೋಣ. ಸಿಕ್ಕಿಬಿದ್ದಿರುವ ಎಲ್ಲಾ ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸಿ ಮತ್ತು ಅವರು ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ಭಾವಿಸುತ್ತೇವೆ. ಘರ್ಷಣೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತೇವೆ," ಎಂದು ಟ್ವೀಟ್ ಮಾಡಿದ್ದಾರೆ.
ಭೀಕರ ದುರಂತ ಎಂದು ಶಶಿ ತರೂರ್ ಟ್ವೀಟ್:
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ್ ಸಾವು ಒಂದು ಭೀಕರ ದುರಂತ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಮೃತ ವಿದ್ಯಾರ್ಥಿ ನವೀನ್ ಸಾವಿನ ಕುರಿತು ಮರುಕ ವ್ಯಕ್ತಪಡಿಸಿದ ಶಶಿ ತರೂರ್, ಉಕ್ರೇನ್ ನೆಲದಲ್ಲಿ ಸಿಲುಕಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಮನೆ ಮಾಡಿರುವ ಆತಂಕದ ಬಗ್ಗೆ ಉಲ್ಲೇಖಿಸಿದ್ದಾರೆ.
ಭಾರತೀಯ ವಿದೇಶಾಂಗ ಸಚಿವಾಲಯದ ಟ್ವೀಟ್:
ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ತೀವ್ರ ದುಃಖದಿಂದ ದೃಢಪಡಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನಾವು ಸಂತಾಪವನ್ನು ತಿಳಿಸುತ್ತೇವೆ.
ಖಾರ್ಕಿವ್‌ನಲ್ಲಿರುವ ಭಾರತೀಯ ಪ್ರಜೆಗಳು ಸೇರಿದಂತೆ ಇತರ ಸಂಘರ್ಷ ವಲಯಗಳಲ್ಲಿರುವ ನಗರಗಳಿಂದ ಸುರಕ್ಷಿತವಾಗಿ ಭಾರತೀಯ ಪ್ರಜೆಗಳನ್ನು ಕಳುಹಿಸಿಕೊಡುವಂತೆ ವಿದೇಶಾಂಗ ಕಾರ್ಯದರ್ಶಿ ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳನ್ನು ಸಂಪರ್ಕಿಸಿದ್ದಾರೆ.












Click it and Unblock the Notifications