Chicken Shawarma: ಚಿಕನ್ ಶವರ್ಮಾ ತಿಂದು ಯುವಕ ಸಾವು
ಮುಂಬೈ, ಮೇ 09: ಶವರ್ಮಾ ರೋಲ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ಹಿರಿಯವರವರೆಗೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇತ್ತೀಚಿಗೆ ಶವರ್ಮಾ ತಿಂದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಬೈನಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಮುಂಬೈನ ಟ್ರಾಂಬೆಯಲ್ಲಿ ಚಿಕನ್ ಶವರ್ಮಾ ತಿಂದ 19 ವರ್ಷದ ಯುವಕ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ್ದಾನೆ. ಪ್ರಥಮೇಶ್ ಭೋಕ್ಸೆ ಮೃತ ಯುವಕ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ನಗರ ನಿವಾಸಿಗಳಾದ 19 ವರ್ಷದ ಪ್ರಥಮೇಶ್ ಭೋಕ್ಸೆ, ಹಾಗೂ ಈತನ ಸಂಬಂಧಿ 40 ವರ್ಷದ ಹಮೀದ್ ಅಬ್ಬಾಸ್ ಸೈಯದ್ ಅವರು ಮೇ 3 ರಂದು ಹನುಮಾನ್ ಛಲಿ ಬಳಿ ಇರುವ ಬೀದಿ ಬದಿಯ ಸ್ಟಾಲ್ ಒಂದರಲ್ಲಿ ಚಿಕನ್ ಶವರ್ಮಾ ಸೇವಿಸಿದ್ದಾರೆ.

ಈ ಅಂಗಡಿಯನ್ನು ಆನಂದ್ ಕಾಂಬ್ಳೆ ಹಾಗೂ ಮೊಹಮ್ಮದ್ ಶೇಖ್ ಎಂಬುವವರು ನಡೆಸುತ್ತಿದ್ದರು. ಚಿಕನ್ ಶವರ್ಮಾ ಸೇವಿಸಿ ಮಾರನೇ ದಿನ ಪ್ರಥಮೇಶ್‌ಗೆ ತೀವ್ರವಾಗಿ ಹೊಟ್ಟೆನೋವು ಶುರುವಾಗಿದ್ದು, ಆತ ವಾಂತಿ ಮಾಡಲು ಶುರು ಮಾಡಿದ್ದಾನೆ. ಇದಾದ ನಂತರ ಆತನನ್ನು ಸಮೀಪದ ಸರ್ಕಾರಿ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಆತ ಚೇತರಿಸಿಕೊಂಡಿದ್ದಾನೆ. ಆದರೆ ಮೇ.5 ರಂದು ಮತ್ತೆ ಆತನಿಗೆ ಡಯೇರಿಯಾ ಕಾಣಿಸಿಕೊಂಡಿದ್ದು, ಆತನನ್ನು ಪಾರೆಲ್‌ನಲ್ಲಿರುವ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಆತನಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದರು.
ಆದರೆ ಸೋಮವಾರ ಬೆಳಗ್ಗೆ ಆತನಲ್ಲಿ ನಿತ್ರಾಣ ಕಾಣಿಸಿಕೊಂಡಿದ್ದು, ಮತ್ತೆ ಕುಟುಂಬದವರು ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಪ್ರಥಮೇಶ್ ಭೋಕ್ಸೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮೇ 5ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಳಾದ ಕೋಳಿಯನ್ನು ಬಳಸಿ ಶವರ್ಮಾ ತಯಾರಿಸಿದ್ದಕ್ಕಾಗಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧ ಮಹಾರಾಷ್ಟ್ರ ಪೊಲೀಸರು ಶವರ್ಮಾ ಅಂಗಡಿ ನಡೆಸುತ್ತಿದ್ದ ಇಬ್ಬರ ವಿರುದ್ಧ ಕೇಸ್ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.












Click it and Unblock the Notifications