ಮುಂಬೈನ ರೆಸ್ಟೊರೆಂಟ್‌ನಲ್ಲಿ ಚಿಕನ್ ಖಾದ್ಯದಲ್ಲಿ ಇಲಿ ಮಾಂಸ ಕಂಡು ವ್ಯಕ್ತಿ ಶಾಕ್: ಮ್ಯಾನೇಜರ್, ಬಾಣಸಿಗನ ವಿರುದ್ಧ ದೂರು!
ಮುಂಬೈ ಆಗಸ್ಟ್ 16: ಚಿಕನ್ ಖಾದ್ಯದಲ್ಲಿ ಇಲಿ ಮಾಂಸ ಕಂಡು ವ್ಯಕ್ತಿಯೊಬ್ಬ ಗಾಬರಿಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ರೆಸ್ಟೊರೆಂಟ್‌ನಲ್ಲಿ ಚಿಕನ್ ಖಾದ್ಯದಲ್ಲಿ ಇಲಿ ಮಾಂಸ ಕಂಡು ಬಂದಿದೆ.
ಮಂಗಳವಾರ ಮುಂಬೈನ ಬಾಂದ್ರಾ ಪ್ರದೇಶದ ಜನಪ್ರಿಯ ರೆಸ್ಟೋರೆಂಟ್‌ನ ಚಿಕನ್ ಖಾದ್ಯದಲ್ಲಿ ಇಲಿ ಮಾಂಸದ ತುಂಡನ್ನು ಗ್ರಾಹಕ ಕಂಡು ರೆಸ್ಟೋರೆಂಟ್‌ನ ವ್ಯವಸ್ಥಾಪಕರು ಮತ್ತು ಅಡುಗೆಯವರ ಮೇಲೆ ಆಕ್ರೋಶಗೊಂಡಿದ್ದಾರೆ. ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರುದಾರರಾದ ಅನುರಾಗ್ ಸಿಂಗ್ ಪ್ರಕಾರ, ಅವರು ಬಾಂದ್ರಾ ಪಶ್ಚಿಮದ ಪಾಲಿ ಹಿಲ್‌ನಲ್ಲಿರುವ ರೆಸ್ಟೋರೆಂಟ್‌ಗೆ ತಮ್ಮ ಸ್ನೇಹಿತನೊಂದಿಗೆ ಊಟ ಮಾಡಲು ಹೋಗಿದ್ದರು. ಅವರು ಬ್ರೆಡ್ನೊಂದಿಗೆ ಚಿಕನ್ ಮತ್ತು ಮಟನ್ ಥಾಲಿ (ಪ್ಲ್ಯಾಟರ್) ಆರ್ಡರ್ ಮಾಡಿದರು. ತಿನ್ನುವಾಗ ಅವರು ವಿಭಿನ್ನವಾಗಿ ಕಾಣುವ ಮಾಂಸದ ತುಂಡನ್ನು ಗಮನಿಸಿದರು. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಇಲಿ ಮಾಂಸದ ತುಂಡು ಎಂದು ಅವರು ಅರಿತುಕೊಂಡರು.
ಸಿಂಗ್ ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಕೇಳಿದಾಗ ಅವರು ನುಣುಚಿಕೊಳ್ಳುವ ಉತ್ತರವನ್ನು ನೀಡಿದರು. ಇದರ ಬೆನ್ನಲ್ಲೇ ಅನುರಾಗ್ ಸಿಂಗ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ವಿವಿಯನ್ ಆಲ್ಬರ್ಟ್ ಶಿಕಾವರ್, ಆ ಸಮಯದಲ್ಲಿ ಹೋಟೆಲ್‌ನಲ್ಲಿದ್ದ ಬಾಣಸಿಗ ಮತ್ತು ಚಿಕನ್ ಸರಬರಾಜುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಿಕನ್ ಮಾಂಸದಲ್ಲಿ ಕೋಳಿ ತಲೆ
ಹಿಂದೊಮ್ಮೆ ಫ್ರೆಶ್ ಆಗಿ ಆರ್ಡರ್ ಮಾಡಿದ್ದ ಕೆಎಫ್‍ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೋಳಿ ತಲೆ ಸಿಕ್ಕಿರುವುದನ್ನು ಕಂಡು ಮಹಿಳೆ ಶಾಕ್ ಆಗಿದ್ದರು. ಇನ್ನು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.
ಗೇಬ್ರಿಯಲ್ ಎಂಬ ಮಹಿಳೆ ಆಗ್ನೇಯ ಲಂಡನ್‍ನ ಟ್ವಿಕನ್ ಹ್ಯಾಮ್‍ನಲ್ಲಿರುವ ಕೆಎಫ್‍ಸಿ ಫೆಲ್ತಮ್‍ನಿಂದ ಚಿಕನ್ ಹಾಟ್ ವಿಂಗ್ಸ್ ಆರ್ಡರ್ ಮಾಡಿದ್ದರು. ಈ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿರುವ ಚಿಕನ್ ತಿನ್ನುವ ವೇಳೆ ಅವರಿಗೆ ಕೋಳಿ ತಲೆ ಕಂಡುಬಂದಿದೆ. ಆಗ ಅದನ್ನು ಕಂಡು ಉಳಿದ ಚಿಕನ್ ಸಹ ಸೇವಿಸಲು ಸಾಧ್ಯವಾಗದೇ ಎಸೆದಿದ್ದಾರೆ. ಎಸೆಯುವ ಮುನ್ನ ಅದರ ಫೋಟೋವನ್ನು ಕ್ಲಿಕ್ಕಿಸಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು.
ಫೋಟೋದಲ್ಲಿ ಕೊಕ್ಕನ್ನು ಸಹ ಕತ್ತರಿಸದೇ ಇಡೀ ತಲೆಯನ್ನು ಗರಿಗರಿಯಾಗಿ ಬೇಯಿಸಿ ಹಾಗೆಯೇ ನೀಡಿರುವುದನ್ನು ಕಾಣಬಹುದಾಗಿದೆ. ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ನೆಟ್ಟಿಗರು ಹಲವಾರು ರೀತಿ ಕಾಮೆಂಟ್ ಮಾಡಿದ್ದರು.












Click it and Unblock the Notifications