Air India Express: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 70ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು!
ದೆಹಲಿ ಮೇ 8: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 70ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಏರ್‌ಲೈನ್ಸ್‌ನ ಹಿರಿಯ ಸಿಬ್ಬಂದಿಗಳು ಇದ್ದಕ್ಕಿದ್ದಂತೆ ಅನಾರೋಗ್ಯ ರಜೆ ತೆಗೆದುಕೊಂಡ ಕಾರಣ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಸುಮಾರು 300 ಹಿರಿಯ ಕ್ಯಾಬಿನ್ ಸಿಬ್ಬಂದಿಗಳು ಕೊನೆಯ ಕ್ಷಣದಲ್ಲಿ ಅಸ್ವಸ್ಥರಾಗಿದ್ದು ಅವರ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಅಲ್ಲದೆ ಅನೇಕ ಸಿಬ್ಬಂದಿಗಳು ರಜೆಯ ಮೇಲೆ ಇರುವುದರಿಂದ ಹಲವಾರು ವಿಮಾನಗಳು ವಿಳಂಬವಾಗಿವೆ. ಈ ಬಗ್ಗೆ ನಾಗರಿಕ ವಿಮಾನಯಾನ ಪ್ರಾಧಿಕಾರ ಸಂಪೂರ್ಣ ತನಿಖೆ ನಡೆಸುತ್ತಿದೆ. ವಿಮಾನಯಾನ ಸಂಸ್ಥೆ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ನಾವು ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ಹಠಾತ್ ರಜೆಯ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಕ್ಷಮೆಯಾಚಿಸಿದ ಏರ್‌ಲೈನ್ಸ್
ಹಲವಾರು ಪ್ರಯಾಣಿಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿಮಾನಗಳ ಹಠಾತ್ ರದ್ದತಿಯ ಬಗ್ಗೆ ದೂರು ನೀಡಿದ್ದಾರೆ. ರದ್ದತಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. X ನಲ್ಲಿನ ಪ್ರಯಾಣಿಕರೊಬ್ಬರು ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದಾಗ ತಾನು ವಿಮಾನ ನಿಲ್ದಾಣವನ್ನು ತಲುಪಿದ್ದೇನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಅತಿಥಿಗಳಿಗೆ ಈ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ವಿಮಾನ ರದ್ದತಿಯಿಂದ ಅನನುಕೂಲಕ್ಕೆ ಒಳಗಾದ ಪ್ರಯಾಣಿಕರಿಗೆ ಸಂಪೂರ್ಣ ಹಣ ಮರುಪಾವತಿ ಅಥವಾ ಇನ್ನೊಂದು ವಿಮಾನದಲ್ಲಿ ತಮ್ಮ ಪ್ರಯಾಣವನ್ನು ಮರುಹೊಂದಿಸುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಏರ್‌ಲೈನ್ಸ್ ಹೇಳಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿ ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ?
ಮೂಲಗಳ ಪ್ರಕಾರ, ಟಾಟಾ ಗ್ರೂಪ್‌ನೊಂದಿಗೆ ವಿಲೀನಗೊಂಡ ನಂತರ ಸಿಬ್ಬಂದಿಯ ಉದ್ಯೋಗ ಸಮಯದಲ್ಲಿ ಸಮಾನತೆಯ ಕೊರತೆಯಿದೆ ಎಂದು ಏರ್ ಇಂಡಿಯಾದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸಿಬ್ಬಂದಿ ಆರೋಪಿಸಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮ್ಯಾನೇಜ್‌ಮೆಂಟ್ ಪ್ರಸ್ತುತ ಸಿಬ್ಬಂದಿಗಳಿಗೆ ಏನಾದರೂ ಸಮಸ್ಯೆ ಇದಿಯಾ ಎಂದು ಪರಿಶೀಲನೆ ನಡೆಸಿದೆ. ಈ ವೇಳೆ ಸಿಬ್ಬಂದಿಗಳು ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನಲ್ಲಿ ಹೊಸ ಉದ್ಯೋಗ ಅವಧಿಯನ್ನು ವಿರೋಧಿಸುತ್ತಿದ್ದಾರೆ. ಬಿಡುವಿಲ್ಲದ ಕೆಲಸದಿಂದ ಸಿಬ್ಬಂದಿಗಳು ಬೇಸತ್ತಿದ್ದಾರೆಂದು ತಿಳಿದು ಬಂದಿದೆ.












Click it and Unblock the Notifications