ಮಣಿಪುರ ಹಿಂಸಾಚಾರ ಬಗ್ಗೆ ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ವಿಪಕ್ಷಗಳ ಸಂಸದರ ಪ್ರತಿಭಟನೆ
ನವದೆಹಲಿ, ಜುಲೈ 25: ಮಣಿಪುರದಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಸಮಗ್ರ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರ ಗುಂಪು ಮುಂಗಾರು ಅಧಿವೇಶನದ ಮೂರನೇ ದಿನ ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮೌನವಾಗಿ ಪ್ರತಿಭಟಿಸಿದರು. ವಿಶೇಷವೆಂದರೆ ಈ ಧರಣಿ ನಡೆದದ್ದು ಸೋಮವಾರ ರಾತ್ರಿ 11 ಗಂಟೆಗೆ.
ರಾತ್ರಿ 'ಭಾರತಕ್ಕಾಗಿ ಮಣಿಪುರ' ಎಂಬ ಫಲಕಗಳನ್ನು ಹಿಡಿದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಸಂಸದರು ರಾತ್ರಿ 11 ಗಂಟೆಗೆ ಮೌನ ಪ್ರತಿಭಟನೆ ನಡಿಸಿದರು. ಪ್ರಧಾನಮಂತ್ರಿಗಳು ವಿರುದ್ಧ ಅವರು ಘೋಷಣೆ ಕೂಗಿದರು. ಇಂದು ಮಂಗಳವಾರ ಬೆಳಗ್ಗೆ ಮಣಿಪುರ ಬಿಕ್ಕಟ್ಟಿನ ಕುರಿತು ಉಭಯ ಸದನಗಳಲ್ಲಿ ಪ್ರಧಾನಿ ಮೋದಿಯವರು 'ಸಮಗ್ರ ಹೇಳಿಕೆ' ನೀಡಬೇಕು ಎಂದು ಒತ್ತಾಯಿಸಿದರು.

ಮುಂಗಾರು ಸಂಸತ್ ಅಧಿವೇಶನ ನಡೆದ ಮೂರು ದಿನವು ಮಣಿಪುರ ವಿಚಾರವಾಗಿ ಕೇಳಿಬಂದ ಬೇಡಿಕೆ, ಆಗ್ರಹ ಹಿನ್ನೆಲೆಯಲ್ಲಿ ಮೂರನೇ ದಿನವು ಸಂಸತ್ತಿನಲ್ಲಿ ಕಾರ್ಯಕಲಾಪ ನಡೆಯಲಿಲ್ಲ.
ವಿಪಕ್ಷಗಳು ಚರ್ಚೆ ಬಯಸುತ್ತವೆ
ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಹಲವಾರು ವಿರೋಧ ಪಕ್ಷದ ಸಂಸದರು ಮುಂದೂಡಿಕೆಗೆ ನೋಟಿಸ್ ನೀಡಿದ್ದರು.
ಯಾವುದೇ ಸಮಯದ ನಿರ್ಬಂಧವಿಲ್ಲದೆ ಎಲ್ಲಾ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವ ಚರ್ಚೆಯನ್ನು ಪ್ರತಿಪಕ್ಷಗಳು ಬಯಸುತ್ತವೆ. ಆದರೆ ಮುಂಗಾರು ಅಧಿವೇಶನ ಗುರುವಾರ ಪ್ರಾರಂಭವಾದಾಗಿನಿಂದ ಇದೇ ವಿಷಯ ಕುರಿತು ಪ್ರತಿಭಟನೆ ನಡೆಯುತ್ತಿವೆ.
ಮಣಿಪುರ ಒಂದೇ ಅಲ್ಲ ಪ್ರಮುಖ ವಿಷಯಗಳ ಮೇಲೆ ಚರ್ಚೆ ಮಾಡದೇ ಪ್ರತಿಪಕ್ಷಗಳು ಓಡಿ ಹೋಗುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಪ್ರತಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಅದೇ ಆರೋಪ ಮಾಡಿವೆ. ನೀವು ಚರ್ಚೆಗಳಿಂದ ಓಡಿ ಹೋಗುತ್ತೀರಾ ಎಂದು ಕೇಂದ್ರ ಬಿಜೆಪಿಗೆ ತಿರುಗೇಟು ನೀಡಿವೆ.

ಬಿಜೆಪಿ ವಿರುದ್ಧ ಖರ್ಗೆ ಆರೋಪ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಂದ್ರ ಬಿಜೆಪಿ ಸರ್ಕಾರವು ಸಂವೇದನಾಶೀಲವಾಗಿದೆ ಎಂದು ಆಪಾದಿಸಿದರು. ಪ್ರಧಾನಮಂತ್ರಿಗಳು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ. ಆ ಹೇಳಿಕೆಯ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ, ನೀವು ಹೊರಗೆ ಮಾತನಾಡುತ್ತಿದ್ದೀರಿ ಎಂದು ದೂರಿದರು. ನಿಮ್ಮ ಈ ನಡೆಯಿಂದ ಸಂಸತ್ತಿಗೆ ಅವಮಾನ ಮಾಡಿದಂತಾಗಿದೆ ಎಂದು, ಮಣಿಪುರ ಹಿಂಸಾಚಾರ ಇದೊಂದು ಗಂಭೀರ ವಿಷಯವಾಗಿದೆ ಎಂದು ಖರ್ಗೆ ಹೇಳಿದರು.
ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಅವರು ಸರ್ಕಾರ ನಡೆಸ ಸಮರ್ಥಿಸಿಕೊಂಡರು. ವಿರೋಧ ಪಕ್ಷದ ನಾಯಕರು ಚರ್ಚೆಯಿಂದ ಓಡಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಇತರ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯಗಳ ಬಗ್ಗೆ ವಿಪಕ್ಷಗಳು ಮೌನ ವಹಿಸುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು,
ಮುಂಗಾರು ಅಧಿವೇಶನಕ್ಕೆ ಮುನ್ನವೇ ಪ್ರಧಾನಮಂತ್ರಿಗಳು ಮಣಿಪುರದ ಸೂಕ್ಷ್ಮತೆ ಕುರಿತು ಮಾತನಾಡಿದ್ದಾರೆ. ಹೀಗಿದ್ದರು ಅವರ ನಡೆಯನ್ನು ತಪ್ಪು ಎಂದು ಹೇಳುವ ಮೂಲಕ ಸದನದಲ್ಲಿ ಮಣಿಪುರ ಬಗ್ಗೆ ಚರ್ಚೆಯನ್ನು ಆರಂಭಿಸದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.












Click it and Unblock the Notifications