Karti Chidambaram: ಅಕ್ರಮ ಹಣ ವರ್ಗಾವಣೆ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಆಸ್ತಿ ಜಪ್ತಿ ಮಾಡಿದ ಇಡಿ
ನವದೆಹಲಿ, ಏಪ್ರಿಲ್. 18: ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಇತರರ 11.04 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇಡಿ ವಶಪಡಿಸಿಕೊಂಡಿರುವ ಆಸ್ತಿಯಲ್ಲಿ ರಾಜ್ಯದ ಕೊಡಗು ಜಿಲ್ಲೆಯ ಆಸ್ತಿಯೂ ಸೇರಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಕಾರ್ತಿ ಚಿದಂಬರಂ ಅವರು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರರಾಗಿದ್ದು, ತಮಿಳುನಾಡಿನ ಶಿವಗಂಗದ ಸಂಸದರಾಗಿದ್ದಾರೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣವು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರದಲ್ಲಿ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಮಾಧ್ಯಮ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ನೀಡುವಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ.

ವಿದೇಶಿ ಹೂಡಿಕೆಗೆ ಅನುಮತಿ ನೀಡಿದ್ದಕ್ಕಾಗಿ ಚಿದಂಬರಂ ಅಕ್ರಮ ಹಣ (ಕಿಕ್‌ಬ್ಯಾಕ್) ಪಡೆದಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. "ತನಿಖೆಯ ಸಮಯದಲ್ಲಿ, ಐಎನ್‌ಎಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ನೇರವಾಗಿ ಮತ್ತು ಪರೋಕ್ಷವಾಗಿ ಅಕ್ರಮ ಆದಾಯ ಸ್ವೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಆರೋಪಿ ಪಿ ಚಿದಂಬರಂ ಅವರ ನಿಯಂತ್ರಿತ ಶೆಲ್ ಕಂಪನಿಗಳ ಮೂಲಕ ಎಫ್‌ಐಪಿಬಿ (ವಿದೇಶಿ ಹೂಡಿಕೆ ಪ್ರಚಾರ ಮಂಡಳಿ) ಅನುಮೋದನೆಯನ್ನು ನೀಡಿದ್ದಾರೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಕಾರ್ತಿ ಚಿದಂಬರಂ" ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಇದೆ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕುಟುಂಬದ ವಿರುದ್ಧ ರಾಜಕೀಯ ಪ್ರೇರಿತ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ. ಪಿ ಚಿದಂಬರಂ ಅವರನ್ನು ಆಗಸ್ಟ್ 2019 ರಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಬಂಧಿಸಿತು. ಅದೇ ವರ್ಷ ಅಕ್ಟೋಬರ್‌ನಲ್ಲಿ, ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅವರನ್ನು ಬಂಧಿಸಿತು. ನಂತರ ಅವರು ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದರು.

2007 ರಲ್ಲಿ ಐಎನ್‌ಎಕ್ಸ್ ಮೀಡಿಯಾ ಗ್ರೂಪ್‌ಗೆ ನೀಡಲಾದ ಎಫ್‌ಐಪಿಬಿ ಕ್ಲಿಯರೆನ್ಸ್‌ನಲ್ಲಿ 305 ಕೋಟಿ ರೂಪಾಯಿಯ ಅಕ್ರಮಗಳನ್ನು ಆರೋಪಿಸಿ ಸಿಬಿಐ ಮೇ 2017 ರಲ್ಲಿ ತನ್ನ ಪ್ರಕರಣವನ್ನು ದಾಖಲಿಸಿತ್ತು. ನಂತರ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.












Click it and Unblock the Notifications