ಮೋಹನದಾಸ್ ಪೈ ಟ್ವೀಟ್ ಕ್ರಿಯೆಗೆ ಕೆಟಿಆರ್ ಪ್ರತಿಕ್ರಿಯೆ
ಇನ್ಫೋಸಿಸ್ ಸಂಸ್ಥೆ ಮಾಜಿ ನಿರ್ದೇಶಕ, ಮಣಿಪಾಲ ವಿದ್ಯಾಸಂಸ್ಥೆ ಚೇರ್ಮನ್ ಮೋಹನ್ ದಾಸ್ ಪೈ ಅವರ ಟ್ವೀಟ್ ಒಂದು ಪಕ್ಕದ ತೆಲಂಗಾಣ ರಾಜ್ಯದಲ್ಲಿ ಮತ್ತು ಟ್ವಿಟ್ಟರ್ ನಲ್ಲಿ ಹವಾ ಸೃಷ್ಟಿಸಿದೆ. ಅವರ ಇತ್ತೀಚಿನ ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದ ಟ್ವೀಟ್ ಕೂಡಾ ಸದ್ದನ್ನು ಮಾಡಿತ್ತು.
ಮೋಹನ್ ದಾಸ್ ಪೈ ಅವರು ತೆಲಂಗಾಣ ಸರಕಾರದ ಐಟಿಬಿಟಿ, ಕೈಗಾರಿಕಾ ಖಾತೆಯ ಸಚಿವ ಮತ್ತು ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರರೂ ಆಗಿರುವ ಕೆ.ಟಿ.ರಾಮರಾವ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಒಂದನ್ನು ಮಾಡಿದ್ದರು.
ಮೋಹನದಾಸ್ ಪೈ ಅವರ ಟ್ವೀಟಿಗೆ ಅಷ್ಟೇ ಖಾರವಾಗಿ ಕೆಟಿಆರ್ ಪ್ರತಿಕ್ರಿಯೆಯನ್ನು ನೀಡಿ, ಕರ್ನಾಟಕ ಸರಕಾರದ ನಲವತ್ತು ಪರ್ಸೆಂಟ್ ಕಮಿಷನ್ ಮತ್ತು ಗುಜರಾತ್ ಸರಕಾರವನ್ನೂ ತಮ್ಮ ಟ್ವೀಟ್ ನಲ್ಲಿ ಎಳೆದು ತಂದಿದ್ದಾರೆ.
ಕೇಂದ್ರ ಸರಕಾರದ ವಿರುದ್ದ ಸಮರ ಸಾರಿರುವ ತಂದೆ (ಕೆಸಿಆರ್) ಮತ್ತು ಮಗ (ಕೆಟಿಆರ್), ಮೋಹನದಾಸ್ ಪೈ ಅವರ ಟ್ವೀಟಿಗೆ ನೀಡಿದ ಪ್ರತಿಕ್ರಿಯೆ, 1,200ಕ್ಕೂ ಹೆಚ್ಚು ರಿಟ್ವೀಟ್ ಪಡೆದುಕೊಂಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮೋಹನದಾಸ್ ಪೈ ಅವರು ಕೆಟಿಆರ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್
ಆಗಸ್ಟ್ 31ರಂದು ಮೋಹನದಾಸ್ ಪೈ ಅವರು ಕೆಟಿಆರ್ ಅವರಿಗೆ ಟ್ಯಾಗ್ ಮಾಡಿ, ಇದರ ಜೊತೆಗೆ ಬಿಜೆಪಿಯ ವಕ್ತಾರ ಸಂಜು ವರ್ಮಾ ಮತ್ತು ಓನ್ಲಿ ಫ್ಯಾಕ್ಟ್ ಇಂಡಿಯಾದ ಸಂಸ್ಥಾಪಕರಾದ ವಿಜಯ್ ಪಟೇಲ್ ಅವರನ್ನೂ ಟ್ಯಾಗ್ ಮಾಡಿ ಈ ರೀತಿ ಟ್ವೀಟ್ ಮಾಡಿದ್ದರು. "ಕೆಟಿಆರ್, ನೀವು ನಿಜವಾಗಿಯೂ ಸೂಪರ್ ಸ್ಟಾರ್, ನೀವು ತೆಲಂಗಾಣವನ್ನು ದೀರ್ಘಕಾಲ ಆಳಿದ ಕಾರಣ, ದಯವಿಟ್ಟು ನಿಮ್ಮ ರಾಜ್ಯದಲ್ಲಿನ ಅಪೌಷ್ಟಿಕತೆಯ ಅಂಕಿಅಂಶವನ್ನು ಬಿಡುಗಡೆ ಮಾಡಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಏನು ಕ್ರಮ ತೆಗೆದುಕೊಂಡಿದ್ದೀರಿ. ನಿಮ್ಮ ಕೆಲಸದ ಬಗ್ಗೆ ಮಾತನಾಡಿ, ಇನ್ನೊಬ್ಬರ ಬಗ್ಗೆ ಹೇಳಿಕೆಯನ್ನು ನೀಡಬೇಡಿ" ಎಂದು ಮೋಹನದಾಸ್ ಪೈ ಟ್ವೀಟ್ ಮಾಡಿದ್ದರು.

ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಿ ಕೆಟಿಆರ್ ಟ್ವೀಟ್
ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಿ ಕೆಟಿಆರ್ ಟ್ವೀಟ್ ಮಾಡಿದ್ದರು. ಅದಕ್ಕೆ ಮೇಲಿನ ರೀತಿಯಲ್ಲಿ ಮೋಹನದಾಸ್ ಪೈ ಟ್ವೀಟ್ ಮಾಡಿದ್ದರು. ಕೆಟಿಆರ್ ಪ್ರಧಾನಿಯವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು ಹೀಗೆ. "ಅಪೌಷ್ಟಿಕತೆಗೆ ಪರಿಹಾರವಾಗಿ ಭಜನೆ! ಅದೂ ಪ್ರಧಾನಿಯವರಿಂದ! ನನ್ನ ಪ್ರಕಾರ ಅದು ಟೆಲಿಪ್ರಾಂಪ್ಟರ್ ಟೈಪೋ ಇರಬೇಕು. ಭೋಜನದ ಬದಲು ಭಜನ್ ಎಂದಾಗಿರುತ್ತದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 101/116 ಸ್ಥಾನದಲ್ಲಿದೆ ಮತ್ತು ಅಪೌಷ್ಟಿಕತೆಗೆ ತಕ್ಷಣದ ಪರಿಹಾರದ ಅಗತ್ಯವಿದೆಯೇ ಹೊರತು ಕಾಮಿಕ್ ಅಲ್ಲ"ಎಂದು ಕೆಟಿಆರ್ ಟ್ವೀಟ್ ಮಾಡಿದ್ದರು.

ಅಪೌಷ್ಟಿಕತೆಯ ಟ್ವೀಟಿಗೆ ತಿರುಗೇಟು ಕೆಟಿಆರ್
ಮೋಹನದಾಸ್ ಪೈ ಅವರ ಮೇಲಿನ ಅಪೌಷ್ಟಿಕತೆಯ ಟ್ವೀಟಿಗೆ ತಿರುಗೇಟು ಕೆಟಿಆರ್ ನೀಡಿದ್ದು ಹೀಗೆ, "ನಿಮ್ಮ ಚಾಲೆಂಜ್ ಅನ್ನು ಸ್ವೀಕರಿಸಿದ್ದೇನೆ, ಮುಂದಿನ 18 ತಿಂಗಳುಗಳಲ್ಲಿ, ನನ್ನ ರಾಜ್ಯದ ಅಪೌಷ್ಟಿಕತೆಯ ಅಂಕಿಅಂಶಗಳಲ್ಲಿ ನೀವು ಗಮನಾರ್ಹ ಬದಲಾವಣೆಯನ್ನು ನೋಡುತ್ತೀರಿ. ನನ್ನ ಟ್ವೀಟ್ ಅನ್ನು ನೆನೆಪಿಸಿ ಇಟ್ಟುಕೊಳ್ಳಿ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೋಹನದಾಸ್ ಪೈ ಕ್ರಿಯೆಗೆ ಕೆಟಿಆರ್ ಪ್ರತಿಕ್ರಿಯೆ
ಇವರಿಬ್ಬರ ಟ್ವಿಟ್ಟರ್ ವಾರ್ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ನೂರಾರು ಪ್ರತಿಕ್ರಿಯೆಗಳು ಈ ಟ್ವೀಟಿಗೆ ಬಂದಿದ್ದು, ಅದರಲ್ಲಿ ಇದುವರೆಗೆ ಏನು ಮಾಡಿದ್ದೀರಿ ಎನ್ನುವ ಅಂಕಿ ಅಂಶವನ್ನು ಕೊಡಿ ಎಂದರೆ, ಮುಂದಿನ ಹದಿನೆಂಟು ತಿಂಗಳು ಎಂದು ಕೆಟಿಆರ್ ಹೇಳುತ್ತಿದ್ದಾರೆ ಎಂದು ಟ್ವಿಟ್ಟಿಗರೊಬ್ಬರು ಲೇವಡಿಯನ್ನು ಮಾಡಿದ್ದಾರೆ.












Click it and Unblock the Notifications