ಕೊರೊನಾ ಕಾಲದಲ್ಲಿ ಕೆಲಸ: ಜಗತ್ತಿಗೆ ಮಾದರಿಯಾದ ಭಾರತ!

ಬೆಂಗಳೂರು, ನ. 07: ಬದಲಾದ ಕಾಲಘಟ್ಟದಲ್ಲಿ ಇದೇ ಮೊದಲ ಬಾರಿ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್) 2020 ಆನ್‌ಲೈನ್‌ನಲ್ಲಿ ನಡೆಯಲಿದೆ. ಕೊರೊನಾ ವೈರಸ್ ಆತಂಕದಿಂದಾಗಿ ವರ್ಚುವಲ್‌ ಆಗಿ ನಡೆಯುವ ಮೇಳಕ್ಕೆ ಉದ್ಯಮಿಗಳಿಂದ ಜಗತ್ತಿನಾದ್ಯಂತ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೊರೊನಾ ವೈರಸ್ ಇಡೀ ಜಗತ್ತಿನ ಜೀವನ ವಿಧಾನವನ್ನೇ ಬದಲಿಸಿದೆ. ಜೊತೆಗೆ ಕೊರೊನಾ ಸಂಕಷ್ಟದಲ್ಲಿ ವಿವಿಧ ಕ್ಷೇತ್ರಗಳ ಕೆಲಸದ ರೀತಿಯೂ ಬದಲಾಗಿದೆ.

ಈ ಬಾರಿಯ ಬೆಂಗಳೂರು ತಂತ್ರಜ್ಞಾನ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19ರಂದು ಉದ್ಘಾಟಿಸಲಿದ್ದಾರೆ. ಕೊರೊನಾ ಆತಂಕದಿಂದಾಗಿ ನವೆಂಬರ್ 19 ರಿಂದ 21ರವರೆಗೆ ವರ್ಚುವಲ್‌ ಮೇಳ ಆಯೋಜಿಸಲಾಗಿದ್ದು, ಮೇಳಕ್ಕೆ ಉದ್ಯಮ ವಲಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೇಳದ ಕುರಿತು ವಿವಿಧ ಕ್ಷೇತ್ರಗಳ ಉದ್ಯಮಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಬೆಂಗಳೂರು ತಂತ್ರಜ್ಞಾನ ಮೇಳದಲ್ಲಿ ಯಾವ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ನಡೆಯಬಹದು ಎಂಬುದರ ಬಗ್ಗೆ ಪ್ರಮುಖ ಉದ್ಯಮಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯ ಹೀಗಿವೆ.

ಕ್ರಿಸ್ ಗೋಪಾಲಕೃಷ್ಣ

ಕ್ರಿಸ್ ಗೋಪಾಲಕೃಷ್ಣ

* ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ತಂತ್ರಜ್ಞಾನ ಬಳಸಿ ದೂರದಲ್ಲಿದ್ದುಕೊಂಡೇ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿದೆ. ಹೀಗಾಗಿ ಭವಿಷ್ಯದಲ್ಲಿ ಯಾವೆಲ್ಲಾ ಕೆಲಸಗಳನ್ನು ದೂರದಲ್ಲಿದ್ದುಕೊಂಡೇ ಕೆಲಸ ಮಾಡಬಹುದು ಎಂಬುದು ಮುಖ್ಯವಾಗಿ ಚರ್ಚೆಯಾಗಬಹುದು. ಅಂದರೆ, ಇದು ಶ್ರೇಣಿ 2 ಮತ್ತು ಶ್ರೇಣಿ 3 ಗೆ ಸೇರಿದ ಪ್ರದೇಶಗಳಲ್ಲಿ ಮಾಹಿತಿ ತಂತಜ್ಞಾನ ಉದ್ಯಮದ ಬೆಳವಣಿಗೆ ಕುರಿತಾಗಿರುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ತಂಡದ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.

* ಮೈಸೂರು, ಮಂಗಳೂರು, ಧಾರವಾಡ-ಹುಬ್ಬಳ್ಳಿಯಂತಹ ನಗರಗಳಿಗೆ ಮಾಹಿತಿ ತಂತ್ರಜ್ಞಾನ ಉದ್ಯಮ ಈಗಾಗಲೇ ಇದೆ. ಇದು ಇನ್ನಷ್ಟು ವಿಸ್ತರಣೆಗೊಳ್ಳಬಹುದೇ ಎಂಬ ನೆಲೆಯಲ್ಲಿ ಹೆಚ್ಚಿನ ಚರ್ಚೆಯಾಗಬಹುದು.

* ಜೊತೆಗೆ ಈಗ ದತ್ತಾಂಶ ಎರಡು ವರ್ಷಗಳಿಗೊಮ್ಮೆ ದುಪ್ಪಟ್ಟಾಗುತ್ತಿದ್ದು ಬೃಹತ್ತಾಗಿ ಬೆಳೆಯುತ್ತಿದೆ. ಇದನ್ನು ಆರ್ಥಿಕ ಲಾಭವಾಗಿ ಪರಿವರ್ತಿಸಿಕೊಳ್ಳುವುದು ಹೇಗೆ? ಇದಕ್ಕೆ ಬೇಕಾದ ನಿಯಂತ್ರಣ ಕ್ರಮಗಳೇನು? ಖಾಸಗಿತನದ ರಕ್ಷಣೆ, ಸುರಕ್ಷತೆ ಖಾತ್ರಿ ಪಡಿಸುವುದು ಹೇಗೆ? ಇವುಗಳ ಬಗ್ಗೆ ಹೆಚ್ಚಿನ ಚಿಂತನ-ಮಂಥನ ನಡೆಯುವ ಸಾಧ್ಯತೆ ಇದೆ.

* ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ನಮ್ಮದೇ ಉತ್ಪನ್ನಗಳನ್ನು ರೂಪಿಸಲು ಹೇಗೆ ಮುಂದುವರಿಯಬೇಕು? ಇದಕ್ಕಾಗಿ ವಿವಿಧ ಉದ್ಯಮಗಳ ಸಂಯೋಜನೆಯ ಮಹತ್ವ ಎಷ್ಟು? ಈ ಕುರಿತು ಚರ್ಚೆಗಳಲ್ಲಿ ಒತ್ತು ಕಂಡುಬರಬಹುದು.

* ಬಾಹ್ಯಾಕಾಶ, ರಕ್ಷಣೆ, ವಿದ್ಯುತ್, ಆರೋಗ್ಯ ಸೇವೆ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ ಇವುಗಳ ಬಗ್ಗೆ ಸಹಜವಾಗಿಯೇ ಹೆಚ್ಚಿನ ಚರ್ಚೆ ನಡೆಯಲಿದೆ ಎಂದು ಕ್ರಿಸ್ ಗೋಪಾಲಕೃಷ್ಣ ಹೇಳಿದ್ದಾರೆ.

ಕಿರಣ್ ಮಜುಂದಾರ್ ಷಾ

ಕಿರಣ್ ಮಜುಂದಾರ್ ಷಾ

ಜೈವಿಕ ವಿಜ್ಞಾನಗಳ ದತ್ತಾಂಶ, ಕೃಷಿ ಜೈವಿಕ ತಾಂತ್ರಿಕತೆ, ಟೆಲಿ ಹೆಲ್ತ್‌, ಟೆಲಿ ಮೆಡಿಸಿನ್, ಲಸಿಕೆಗಳು, ಔಷಧ ಉತ್ಪಾದನೆ ಹಾಗೂ ಬಿಗ್ ಡೇಟಾ ಅನಾಲಿಟಿಕ್ಸ್, ಕೋವಿಡ್-19 ದಿಂದಾಗಿ ಸೃಷ್ಟಿಯಾಗಿರುವ ನ್ಯೂ ನಾರ್ಮಲ್‌, ಭವಿಷ್ಯದಲ್ಲಿ ಹೆಬ್ರಿಡ್ ಗೋಷ್ಠಿಗಳ ಪ್ರಾಮುಖ್ಯ ಇವುಗಳ ಬಗ್ಗೆ ಆಲೋಚಿಸುವ ಅಗತ್ಯವಿದೆ ಎಂದು ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಹಾಗೂ ಜೈವಿಕ ತಂತ್ರಜ್ಞಾನ ದೂರದರ್ಶಿತ್ವ ತಂಡದ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಶಾಂತ್ ಪ್ರಕಾಶ್

ಪ್ರಶಾಂತ್ ಪ್ರಕಾಶ್

* ಡಿಜಿಟಲ್ ಆರ್ಥಿಕತೆಯನ್ನು ಇನ್ನಷ್ಟು ತ್ವರಿತಗೊಳಿಸುವ ಬಗ್ಗೆ ಆಲೋಚಿಸಬೇಕಾಗಿದೆ ಎಂದು ಆಕ್ಸೆಲ್ ಪಾರ್ಟ್ನರ್ಸ್ ಸಂಸ್ಥೆಯ ಪಾಲುದಾರ ಹಾಗೂ ಕರ್ನಾಟಕ ನವೋದ್ಯಮ ದೂರದರ್ಶಿತ್ವ ತಂಡದ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಅಭಿಪ್ರಾಯ ಪಟ್ಟಿದ್ದಾರೆ.


* ಆರೋಗ್ಯಸೇವೆ, ಶಿಕ್ಷಣ, ಸಂಚಾರ, ಕೃಷಿ ತಾಂತ್ರಿಕತೆಯಲ್ಲಿ ಉಂಟಾಗಲಿರುವ ಹೊಸ ವಿಧಾನಗಳ ಕುರಿತು ಕೂಡ ಹೆಚ್ಚಿನ ಸಮಾಲೋಚನೆ ನಡೆಯಬಹುದು.


* ಭಾರತದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಜೊತೆಗೆ ಬೇರೆ ದೇಶಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವೇನು ಕೊಡುಗೆ ನೀಡಬಹುದು ಎಂಬುದು ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶ ಎಂದು ಪ್ರಶಾಂತ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷದ ಮೇಳ

ಕಳೆದ ವರ್ಷದ ಮೇಳ

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆದಿದ್ದ 22ನೇ ಬಿಟಿಎಸ್ ಮೇಳದಲ್ಲಿ 21 ದೇಶಗಳು, 253 ಅಂತರರಾಷ್ಟ್ರೀಯ ನಿಯೋಗಗಳು, 44 ವಿಚಾರ ಗೋಷ್ಠಿಗಳು ಮತ್ತು 262 ಸಂಪನ್ಮೂಲ ವ್ಯಕ್ತಿಗಳು ಹಾಗೂ 12,350 ಸಂದರ್ಶಕರು ಭಾಗವಹಿಸಿದ್ದರು. ಇದೀಗ ವರ್ಚ್ಯುಯಲ್ ಆಗಿ ನಡೆಯಲಿರುವ ಈ ಮೇಳಕ್ಕೆ ಮತ್ತಷ್ಟು ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಬಿಟಿಎಸ್ 22ನೇ ಮೇಳವನ್ನು ಉದ್ಘಾಟಿಸಲಿದ್ದು, ರಾಜ್ಯ ಸರ್ಕಾರವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ ಸ್ಥಾಪಿಸಲಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+