ಚಂದ್ರಬಾಬು ನಾಯ್ಡು- ಮೋದಿ ಇನ್ನೂ ಹತ್ತಿರವಾದ್ರು
ನವದೆಹಲಿ, ಅ.3: ಚಂದ್ರಬಾಬು ನಾಯ್ಡು ಮತ್ತು ನರೇಂದ್ರ ಮೋದಿ ಅವರುಗಳು ದೆಹಲಿಯಲ್ಲಿ ಬುಧವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತೆಲುಗು ದೇಶಂ ಪಕ್ಷ ಮತ್ತೆ ಎನ್‌ಡಿಎ ತೆಕ್ಕೆಗೆ ಮರಳುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಬಿಜೆಪಿಯಿಂದ ಉಚ್ಚಾಟಿತ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಸಹ ಸಭೆಯಲ್ಲಿ ಭಾಗವಹಿಸಿ ಮೋದಿ ಜತೆ ಆಪ್ತ ಸಮಾಲೋಚನೆ ನಡೆಸಿದರು.
ರಾಜಧಾನಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ. ಯುಪಿಎ ವಿರುದ್ಧ ವಾಗ್ಧಾಳಿ ನಡೆಸಿದರು. ಕಾಂಗ್ರೆಸನ್ನು ದೇಶದಿಂದ ತೊಲಗಿಸುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ಜತೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಹಾಡಿಹೊಗಳಿದರು. ತಂತ್ರಜ್ಞಾನ ಬೆಳವಣಿಗೆ, ಹೆದ್ದಾರಿಗಳ ಅಭಿವೃದ್ಧಿ ಸೇರಿದಂತೆ ಹಲವು ಮಹಾನ್ ಸಾಧನೆಗಳು ಎನ್ ಡಿಎ ಸರ್ಕಾರದ ಅವಧಿಯಲ್ಲಿ ಆಗಿದ್ದವು ಎಂದರು.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎಗೆ ಬೆಂಬಲ ಸೂಚಿಸುವ ಬಗ್ಗೆ ನಾಯ್ಡು ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಆದರೆ ಗಮನಮಾರ್ಹವೆಂದರೆ ಇದುವರೆಗೂ ನಾಯ್ಡು ಯಾವುದೇ ನಿರ್ಧಾರವನ್ನು ಘೋಷಿಸಿಲ್ಲ.
ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು. ಇಲ್ಲದಿದ್ದರೆ ದೇಶಕ್ಕೆ ಗಂಡಾಂತರ ಕಾದಿದ್ದು, ಇನ್ನೂ ಸ್ವಲ್ಪ ದಿನಗಳ ಕಾಲ ನಾವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕ ಪರಿಸ್ಥಿತಿ ಮತ್ತು ರೂಪಾಯಿ ಕುಸಿತದ ಹೊಣೆಯನ್ನು ಯುಪಿಎ ಸರ್ಕಾರವೇ ಹೊರಬೇಕು ಎಂದು ಹೇಳಿದರು.












Click it and Unblock the Notifications