ಮೋದಿ ಸಂಪುಟ ವಿಸ್ತರಣೆ : ನಾಲ್ವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ
ನವದೆಹಲಿ, ಸೆಪ್ಟೆಂಬರ್ 03 : ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಒಂಭತ್ತು ನೂತನ ಸಚಿವರು ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ನಾಲ್ವರು ರಾಜ್ಯ ಸಚಿವರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಿತು. ರಾಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್ ಹಾಗೂ ಮುಖ್ತರ್ ಅಬ್ಬಾಸ್ ನಖ್ವಿ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಚಿವರು ತಮ್ಮ ಇಲಾಖೆಯಲ್ಲಿ ಮಾಡಿರುವ ಕೆಲಸಗಳನ್ನು ಪರಿಗಣಿಸಿ ಅವರಿಗೆ ಬಡ್ತಿ ನೀಡಲಾಗಿದ್ದು, ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆ.
ಉತ್ತರ ಕನ್ನಡ ಸಂಸದರಾದ ಅನಂತಕುಮಾರ್ ಹೆಗಡೆ ರಾಜ್ಯ ಸಚಿವರಾಗಿ ಇಂದು ಮೋದಿ ಸಂಪುಟ ಸೇರಿದರು. ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ಪಡೆದಿದ್ದಾರೆ.

ಮೋದಿ ಮಾತನ್ನು ಮನೆ-ಮನೆಗೆ ತಲುಪಿಸಿದವರು
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಿ, ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಎಲ್‌ಪಿಜಿ ಸಬ್ಸಿಡಿ ವಾಪಸ್ ನೀಡಿ ಎಂಬ ಆಂದೋಲನ ದೇಶದಲ್ಲಿ ಯಶಸ್ವಿಯಾಗುವಲ್ಲಿ ಧರ್ಮೇಂದ್ರ ಪ್ರಧಾನ್ ಅವರ ಶ್ರಮ ಸಾಕಷ್ಟಿದೆ. ಆದ್ದರಿಂದ, ಸಚಿವ ಸಂಪುಟ ವಿಸ್ತರಣೆ ವೇಳೆ ಕ್ಯಾಬಿನೆಟ್ ದರ್ಜೆ ನೀಡಲಾಗಿದೆ.

ಇಂಧನ ಇಲಾಖೆಯಲ್ಲಿ ಉತ್ತಮ ಕಾರ್ಯ
ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ. ಹಳ್ಳಿಹಳ್ಳಿಗೂ ವಿದ್ಯುತ್ ಎಂಬ ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಮತ್ತು ಕಲ್ಲಿದ್ದಲು ಹರಾಜಿನಲ್ಲಿ ಪಾರದರ್ಶಕತೆ ತಂದಿದ್ದಕ್ಕಾಗಿ ಬಡ್ತಿ ನೀಡಲಾಗಿದೆ.

ಸರ್ಕಾರ ಸಮರ್ಥಿಸಿಕೊಂಡಿದ್ದರು
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ. ಮೋದಿ ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಸಚಿವರು ಇವರು. ಗೋಹತ್ಯೆ ನಿಷೇಧದ ಚರ್ಚೆಯಲ್ಲಿ ಸರ್ಕಾರವನ್ನು ಸಮರ್ಥಿಸಿಕೊಂಡವರು.

ಪಕ್ಷದ ವಕ್ತಾರೆಯಾಗಿದ್ದರು
ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಮೋದಿ ಸಂಪುಟ ಸೇರುವ ಮುನ್ನ ನಿರ್ಮಲಾ ಅವರು ಬಿಜೆಪಿ ವಕ್ತಾರರಾಗಿದ್ದರು.

ನಮ್ಮ ರಾಜ್ಯದಿಂದ ಆರಿಸಿ ಹೋದವರು
ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ಪಡೆದಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದವರು.












Click it and Unblock the Notifications