ಉತ್ತರಾಖಂಡ: ಬಲವಂತದ ಮತಾಂತರ ಆರೋಪ, ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಘರ್ಷಣೆ
ಹರಿದ್ವಾರ, ಡಿ. 25: ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಪರಸ್ಪರ ಘರ್ಷಣೆ ನಡೆದಿರುವ ಘಟನೆ ಉತ್ತರಕಾಶಿಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ ಉತ್ತರಕಾಶಿ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಸ್ಸೂರಿಯ ಯೂನಿಯನ್ ಚರ್ಚ್‌ನ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಅವರು ತಮ್ಮ ಪತ್ನಿ ಸುಷ್ಮಾ ಕಾರ್ನೆಲಿಯಸ್ ಅವರೊಂದಿಗೆ ಶುಕ್ರವಾರ ಬೆಳಗ್ಗೆ ಪುರೋಲಾ ಬ್ಲಾಕ್‌ನ ಚಿಬಾಲಾ ಗ್ರಾಮಕ್ಕೆ ಆಗಮಿಸಿದ್ದರು. ಕ್ರಿಸ್‌ಮಸ್ ಹಿನ್ನೆಲೆ ಪ್ರಾರ್ಥನೆ ಮಾಡುತ್ತಿದ್ದಾಗ 30 ಕ್ಕೂ ಹೆಚ್ಚು ಜನರ ಗುಂಪು ಅಲ್ಲಿಗೆ ಬಂದು ಬಲವಂತವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

"ಸಂಘಟಕರು, ನೇಪಾಳಿ ಮೂಲವನ್ನು ಹೊಂದಿರುವ ಸ್ಥಳೀಯ ಕ್ರಿಶ್ಚಿಯನ್ನರು ಮತ್ತು ಇತರ ಗ್ರಾಮಸ್ಥರನ್ನು ಕ್ರಿಸ್‌ಮಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಮಧ್ಯಾಹ್ನ ಕಾರ್ಯಕ್ರಮ ನಡೆಯುತ್ತಿದ್ದಾಗ 35 ರಿಂದ 40 ಜನರ ಗುಂಪು ಅಲ್ಲಿಗೆ ತಲುಪಿ ಕಾರ್ಯಕ್ರಮಕ್ಕೆ ತಡೆ ನೀಡಿದ್ದಾರೆ. ಎರಡು ಕಡೆಯವರು ಮೊದಲು ವಾಗ್ವಾದಕ್ಕಿಳಿದು ಪರಸ್ಪರ ಹಲ್ಲೆ ನಡೆಸಿದ್ದು, ಎರಡೂ ಕಡೆಯವರು ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ನಂತರ, ನಾವು ಅಲ್ಲಿಗೆ ತಲುಪಿ ಗಲಾಟೆಯನ್ನು ನಿಲ್ಲಿಸಿದೆವು " ಎಂದು ಪುರೋಲಾ ಪೊಲೀಸ್ ಠಾಣೆ ಪ್ರಭಾರಿ ಕೆ.ಎಸ್.ರಾವತ್ ತಿಳಿಸಿದ್ದಾರೆ.
"ಎರಡೂ ಕಡೆಯವರ ದೂರಿನ ಮೇರೆಗೆ ನಾವು ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ ಮತ್ತು ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಾಧ್ಯಕ್ಷ ವೀರೇಂದ್ರ ಸಿಂಗ್ ರಾವತ್ ಅವರ ದೂರಿನ ಮೇರೆಗೆ ಪೊಲೀಸರು ಕ್ರಿಶ್ಚಿಯನ್ ಕಾರ್ಯಕ್ರಮ ನಡೆಯುತ್ತಿದ್ದ ಮನೆಯ ಮಾಲೀಕ ಜಗದೀಶ್ ವಿರುದ್ಧ ಉತ್ತರಾಖಂಡ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2018 ರ ಸೆಕ್ಷನ್ 3, ಭಾರತೀಯ ದಂಡ ಸಂಹಿತೆಯ (IPC) 153-A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ . ಪುರೋಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಜಗದೀಶ್ ಅವರ ಮನೆಯಲ್ಲಿ ಕ್ರೈಸ್ತ ಸಮುದಾಯದ ಕೆಲವರು ಆಮಿಷ ಒಡ್ಡಿ ಮತಾಂತರದಲ್ಲಿ ತೊಡಗಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ಅವರನ್ನು ತಡೆಯಲು ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಅಲ್ಲಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಲು ಯತ್ನಿಸಿದರು. ಆದರೆ, ಅವರು ನಮ್ಮನ್ನು ನಿಂದಿಸಿ, ಹಲ್ಲೆ ಮಾಡಿ ಇಬ್ಬರನ್ನು ಗಾಯಗೊಳಿಸಿದ್ದಾರೆ ಎಂದು ದೂರಿದ್ದಾರೆ.
ಇನ್ನು, ಯೂನಿಯನ್ ಚರ್ಚ್‌ನ ಪಾದ್ರಿ ಲಾಜರಸ್ ಕರ್ನೇಲಿಯಸ್ ಅವರ ದೂರಿನ ಮೇರೆಗೆ ಐದಾರು ಗುರುತಿಸಲ್ಪಟ್ಟ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪುರೋಲಾ ಪೊಲೀಸ್ ಠಾಣೆ ಪ್ರಭಾರಿ ಕೆಎಸ್ ರಾವತ್ ಹೇಳಿದ್ದಾರೆ.
" ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 427 ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.











Click it and Unblock the Notifications