Tamil Nadu: ಕೇಂದ್ರ ಸರ್ಕಾರಕ್ಕೆ ತಿರುಗೇಟು! ಬಜೆಟ್‌ನಲ್ಲಿ ರೂಪಾಯಿ ಚಿಹ್ನೆ ಕೈಬಿಟ್ಟ ತಮಿಳುನಾಡು
ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಪಟ್ಟಂತೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಜೋರಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಒಪ್ಪಲ್ಲ ಎಂದು ಹೇಳಿದ್ದಾರೆ. ಇದೀಗ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ಮಾಡಲು ಹೊಸ ವಿಧಾನ ಆರಿಸಿಕೊಂಡಿದ್ದಾರೆ.
ತ್ರಿಭಾಷಾ ವಿವಾದದ ನಡುವೆ ತಮಿಳುನಾಡು ಸರ್ಕಾರ ಬಜೆಟ್‌ನಿಂದ ರೂಪಾಯಿ ಚಿಹ್ನೆಯನ್ನು ಕೈಬಿಟ್ಟಿದೆ. ದೇವನಾಗರಿ ಲಿಪಿಯ ರುಪಾಯಿ ಚಿಹ್ನೆಯನ್ನು ಕೈಬಿಟ್ಟಿದ್ದು ತಮಿಳಿನ ಚಿಹ್ನೆಯನ್ನು ಅಳವಡಿಸಿಕೊಂಡಿದೆ.

ಎಂ.ಕೆ. ಸ್ಟಾಲಿನ್ ಸರ್ಕಾರವು ರಾಜ್ಯ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯನ್ನು 'ರು' ತಮಿಳು ಅಕ್ಷರಕ್ಕೆ ಬದಲಾವಣೆ ಮಾಡಿದೆ. ಭಾರತದ ಯಾವುದೇ ರಾಜ್ಯ ರಾಷ್ಟ್ರೀಯ ಕರೆನ್ಸಿ ಚಿಹ್ನೆಯನ್ನು ಕೈಬಿಟ್ಟಿರುವುದು ಇದೇ ಮೊದಲ ಬಾರಿ. ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ.
ಚಿಹ್ನೆ ಬದಲಾವಣೆ ಬಗ್ಗೆ ಸರ್ಕಾರ ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಟೀಕಿಸಿದ್ದು, ತಮಿಳುನಾಡು ಚಿಹ್ನೆಯನ್ನು ಕೈಬಿಡುವ ಮೂಲಕ ಭಾರತ ವಿರೋಧಿ ನಿಲುವನ್ನು ಸ್ಟಾಲಿನ್ ಪಕ್ಷ ತೋರಿಸಿದೆ ಎಂದು ಎನ್‌ಡಿಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ. ರೂಪಾಯಿ ಚಿಹ್ನೆಯನ್ನು ಭಾರತದ ಸಂಕೇತವೆಂದು ವ್ಯಾಪಕವಾಗಿ ಗುರುತಿಸಲಾಗಿದೆ ಎಂದು ಬಿಜೆಪಿಯ ನಾರಾಯಣನ್ ತಿರುಪತಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಮುಖ ಅಂಶಗಳನ್ನು, ವಿಶೇಷವಾಗಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ತಮಿಳುನಾಡು ನಿರಾಕರಿಸಿದ್ದು ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ತಮಿಳುನಾಡಿನ ವಿರೋಧದ ಬಳಿಕ, ಕೇಂದ್ರವು ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಅಡಿಯಲ್ಲಿ ₹573 ಕೋಟಿ ಕೇಂದ್ರ ಶಿಕ್ಷಣ ಸಹಾಯವನ್ನು ತಡೆಹಿಡಿದಿದ್ದು, ತಮಿಳುನಾಡಿನ ಸಿಟ್ಟಿಗೆ ಕಾರಣವಾಗಿದೆ.
ನೀತಿ ನಿಯಮಗಳ ಪ್ರಕಾರ, ರಾಜ್ಯಗಳು ಎಸ್‌ಎಸ್‌ಎ ನಿಧಿಯನ್ನು ಪಡೆಯಲು ಎಬ್‌ಇಪಿ ಮಾರ್ಗಸೂಚಿಗಳನ್ನು ಪಾಲಿಸಬೇಕು, ಇದರಲ್ಲಿ ಶೇಕಡಾ 60 ರಷ್ಟು ಹಣವನ್ನು ಕೇಂದ್ರವು ತಮಿಳುನಾಡಿನಂತಹ ರಾಜ್ಯಗಳಿಗೆ ಒದಗಿಸುತ್ತದೆ. ಪಿಎಂ ಶ್ರೀ ಯೋಜನೆಯಡಿಯಲ್ಲಿ, ತಮಿಳುನಾಡು ಎನ್‌ಇಪಿ 2020 ಅನ್ನು ಕಾರ್ಯಗತಗೊಳಿಸುವುದಾಗಿ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು ಮತ್ತು ಪ್ರತಿಯಾಗಿ ಕೇಂದ್ರವು ಹಣವನ್ನು ನೀಡುತ್ತದೆ.












Click it and Unblock the Notifications