ದೆಹಲಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ; ಎಂ. ಕೆ. ಸ್ಟಾಲಿನ್ ನೇತೃತ್ವ
ನವದೆಹಲಿ, ಏಪ್ರಿಲ್ 02; ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ನೇತೃತ್ವದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರು ದೆಹಲಿಯಲ್ಲಿ ಸೋಮವಾರ ಸಭೆ ನಡೆಸಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚನೆಯ ಭಾಗವಾಗಿ ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್ ನೇತೃತ್ವದಲ್ಲಿ 'ಸಾಮಾಜಿಕ ನ್ಯಾಯ' ಎಂಬ ಪರಿಕಲ್ಪನೆಯಡಿ ಈ ಸಭೆ ನಡೆಯಲಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ನಾಯಕರು. ಆನ್‌ಲೈನ್ ಮೂಲಕ ಟಿಎಂಸಿ, ಎಎಪಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪಕ್ಷದ ಪ್ರತಿನಿಧಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸಭೆಯ ಅಧ್ಯಕ್ಷತೆ ವಹಿಸಿ ಎಂ. ಕೆ. ಸ್ಟಾಲಿನ್ ಮಾತನಾಡಲಿದ್ದಾರೆ. ಟಿಎಂಸಿ ಸಂಸದ ಧೀರಕ್ ಒಬ್ರಿಯಾನ್, ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಬಿಆರ್‌ಎಸ್ ಸಂಸದ ಡಾ. ಕೇಶವ್ ರಾವ್‌ಗೆ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಡಿಎಂಕೆ ನಡೆಸುತ್ತಿರುವ 2ನೇ ಸಭೆ ಇದಾಗಿದೆ.
ಕೆಲವು ದಿನಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ 70ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೇಜಸ್ವಿ ಯಾದವ್, ಜಮ್ಮು ಮತ್ತು ಕಾಶ್ಮೀರದ ಎನ್‌ಸಿಪಿಯ ಫಾರೂಕ್ ಅಬ್ದುಲ್ಲಾ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ಬಿಜೆಪಿ ವಿರುದ್ಧ ಪ್ರಬಲ ವಿರೋಧ ಪಕ್ಷವನ್ನು ಕಟ್ಟುವ ಕಾರ್ಯವನ್ನು ಡಿಎಂಕೆ ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶವಿದೆ ಎಂಬುದನ್ನು ಡಿಎಂಕೆಯ ಸಂಸದ ಪಿ. ವಿಲ್ಸನ್ ತಳ್ಳಿ ಹಾಕಿದ್ದಾರೆ. "ಇದು ಸಾಮಾಜಿಕ ನ್ಯಾಯದ ಅಭಿಯಾನವನ್ನು ದೇಶಾದ್ಯಂತ ನಡೆಸುವ ಕಾರ್ಯಕ್ರಮದ ಭಾಗವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ವಿರೋಧ ಪಕ್ಷ ಒಗ್ಗೂಡಿಸುವ ಕೆಲಸ; ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳು 2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಿರೋಧ ಪಕ್ಷಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿವೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಸಹ ಈ ಮೈತ್ರಿಕೂಟದ ಜೊತೆಗಿದೆ.
2023ರಲ್ಲಿ 9 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಬಳಿಕ ಲೋಕಸಭೆ ಚುನಾವಣೆ ಎದುರಾಗಲಿದೆ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೊಂಡ ಬಳಿಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಸಹ ಚುರುಕಾಗಿ ಸಾಗಿದೆ. ಬಿಜೆಪಿಯೇತರ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡುವ ಸಂಕಲ್ಪ ಮಾಡಿವೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸದಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಮೊಸರು ಪ್ಯಾಕೆಟ್ ಮೇಲೆ 'ದಹಿ' ಎಂದು ಬಳಕೆ ಮಾಡಬೇಕು ಎಂದಾಗ ಸ್ಟಾಲಿನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಸಹ ಕೇಂದ್ರದ ವಿರುದ್ಧ ತೀವ್ರವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ 2024ರ ಚುನಾವಣೆಗೆ ಮೈತ್ರಿಕೂಟದ ಅಡಿ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಇದಕ್ಕಾಗಿ ಪಕ್ಷ ಪ್ರತಿಷ್ಠೆಯನ್ನು ಸಹ ಬದಿಗಿಡಲು ಮುಂದಾಗಿದೆ. ವಿರೋಧ ಪಕ್ಷದ ಮೈತ್ರಿಕೂಟ ರಚನೆಯ ಸಭೆಯಲ್ಲಿ ಖರ್ಗೆ ಪಾಲ್ಗೊಳ್ಳುತ್ತಿದ್ದಾರೆ. ಮೈತ್ರಿಕೂಟದ ನೇತೃತ್ವ ಯಾರು ಬೇಕಾದರೂ ವಹಿಸಲಿ, ನಾವು ಪ್ರಧಾನಿ ಅಭ್ಯರ್ಥಿಯನ್ನು ಕೂಡ ಹೆಸರಿಸುವುದಿಲ್ಲ ಎಂದು ಖರ್ಗೆ ಈಗಾಗಲೇ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.












Click it and Unblock the Notifications