Jharkhand: ಪ್ರಚಾರ ಮಾಡುವಾಗಲೇ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಪರ್ಸ್ ಎಗರಿಸಿದ ಖದೀಮರು
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆಯಲಿದ್ದು, ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಿದ್ದಾರೆ. 43 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಎನ್‌ಡಿಎ, ಇಂಡಿಯಾ ಒಕ್ಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ನಟ-ರಾಜಕಾರಣಿ ಮಿಥುನ್ ಚಕ್ರವರ್ತಿ ಪರ್ಸ್ ಅನ್ನು ಖದೀಮರು ಎಗರಿಸಿದ್ದಾರೆ.
ಮಂಗಳವಾರ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಲೈವ್ ಹಿಂದೂಸ್ತಾನ್ ವರದಿ ಪ್ರಕಾರ, ರೋಡ್‌ಶೋ ಸಮಯದಲ್ಲಿ ತನ್ನ ಪರ್ಸ್ ಕಾಣೆಯಾಗಿದೆ ಎಂದು ತಿಳಿದ ಮಿಥುನ್ ಚಕ್ರವರ್ತಿ ಘಟನೆ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಕೂಡಲೇ ತಮ್ಮ ಪರ್ಸ್ ಕಾಣೆಯಾಗಿರುವ ಬಗ್ಗೆ ರೋಡ್‌ಶೋನಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದಾರೆ. ಬಳಿಕ ಮಿಥುನ್ ಚಕ್ರವರ್ತಿಯವರ ಪರ್ಸ್ ಹಿಂದಿರುಗಿಸುವಂತೆ ಬಹಿರಂಗವಾಗಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಮನವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವ್ಯಂಗ್ಯವಾಡಿದ ಜೆಎಂಎಂ
ಘಟನೆಯ ಬಗ್ಗೆ ಜಾರ್ಖಂಡ್ ಮುಕ್ತಿ ಮೋರ್ಚ್ (ಜೆಎಂಎಂ) ಜಮ್ತಾರಾ ಘಟಕ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದೆ. ಪರ್ಸ್ ವಾಪಸ್ ಕೊಡುವಂತೆ ಬಿಜೆಪಿ ನಾಯಕರು ಮನವಿ ಮಾಡಿರುವ ವಿಡಿಯೋ ಹಂಚಿಕೊಂಡಿರುವ ಜೆಎಂಎಂ "ಬಿಜೆಪಿ ಬೆಂಬಲಿಗರೇ ನಿಮ್ಮ ನಾಯಕರನ್ನಾದರೂ ಬಿಡಿ. ಮಿಥುನ್ ಚಕ್ರವರ್ತಿ ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದು, ಯಾರೋ ಅವರ ಜೇಬು ಪಿಕ್ ಮಾಡಿದ್ದಾರೆ. ಎಂತಹ ಅದ್ಭುತ ಕುಟುಂಬ" ಎಂದು ವ್ಯಂಗ್ಯವಾಡಿದೆ.
43 ಕ್ಷೇತ್ರಗಳಲ್ಲಿ ಮತದಾನ
ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಬುಧವಾರ ಮೊದಲ ಹಂತದ ಚುನಾವಣೆಯಲ್ಲಿ 43 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ನೇರ ಹಣಾಹಣಿ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಎಂಎಂ, ಕಾಂಗ್ರೆಸ್ ಮೈತ್ರಿ ಪಕ್ಷ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದವು. ಈ ಬಾರಿ ಕೂಡ ಜೆಎಂಎಂ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ.
ಮತ್ತೊಂದು ಕಡೆ ಬಿಜೆಪಿ ನೇತೃತ್ವದ ಎನ್‌ಡಿಎ ಕೂಡ ಜಾರ್ಖಂಡ್ ರಾಜ್ಯವನ್ನು ಗೆಲ್ಲಲು ಶತಪ್ರಯತ್ನ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಎರಡನೇ ಹಂತದ ಚುನಾವಣೆ ನವೆಂಬರ್ 20ರಂದು ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications