ಪುರುಷರ ಪೋಸ್ಟರ್ ಕ್ಲೀನ್, ಮಹಿಳೆ ಫೋಟೋಗೆ ಮಾತ್ರ ಗುಟ್ಕಾ ಉಗುಳಿದ ಕಿಡಿಗೇಡಿಗಳು: ವಿಕೃತ ಮನಸ್ಥಿತಿಗೆ ಕನ್ನಡಿ ಹಿಡಿದ ವಿಡಿಯೋ

ಭಾರತದಲ್ಲಿ ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ತಾರತಮ್ಯದಂತಹ ಅನೇಕ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ. ಅಭಿವೃದ್ಧಿಯತ್ತ ಸಾಗುತ್ತಿರುವ ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಿಗಬೇಕಾದ ಕನಿಷ್ಠ ಗೌರವವು ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು, ವಾಸ್ತವದಲ್ಲಿ ಕಾಣಿಸುತ್ತಿಲ್ಲ.

ವಿಪರ್ಯಾಸವೆಂದದರೆ ಹೆಣ್ಣನ್ನು ದೇವತೆಯೆಂದು ಪೂಜಿಸುವ ದೇಶದಲ್ಲೇ ಆಕೆಯ ಇಷ್ಟ-ಕಷ್ಟಗಳಿಗೆ ಬೆಲೆಯಿಲ್ಲ. ಈ ಪುರುಷ ಪ್ರಧಾನ ಸಮಾಜದಲ್ಲಿ ಆಳವಾಗಿ ಬೇರೂರಿರುವ ಕೆಲವರಿಗೆ ಹೆಣ್ಣಿನ ಏಳಿಗೆಯನ್ನು ಸಹಿಸಲಾಗುತ್ತಿಲ್ಲ. ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಇಂತಹ ಮಹಿಳಾ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Misogyny

ವೈರಲ್ ವಿಡಿಯೋದಲ್ಲಿ ಏನಿದೆ?

ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ಘಟನೆಯೊಂದನ್ನು ಪ್ರತೀಕ್ ಠಾಕ್ರೆ ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯ ಹೆದ್ದಾರಿಯ ಸೇತುವೆಯೊಂದರ ಕೆಳಗೆ ಸಾಲಾಗಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.

ಇದರಲ್ಲಿ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರಂತಹ ಪುರುಷ ನಾಯಕರ ಚಿತ್ರಗಳು ಸಂಪೂರ್ಣವಾಗಿ ಸ್ವಚ್ಛವಾಗಿದ್ದವು. ಆದರೆ, ಅವುಗಳ ಪಕ್ಕದಲ್ಲೇ ಇದ್ದ ಟೂತ್‌ಪೇಸ್ಟ್ ಜಾಹೀರಾತಿನಲ್ಲಿದ್ದ ಮಹಿಳೆಯ ಮುಖದ ಮೇಲೆ ಮಾತ್ರ ಕಿಡಿಗೇಡಿಗಳು ಗುಟ್ಕಾ ಮತ್ತು ಪಾನ್ ಜಗಿದು ಉಗುಳಿದ್ದರು.

ಪ್ರತೀಕ್ ತಮ್ಮ ವಿಡಿಯೋದಲ್ಲಿ ನಾಗರಿಕರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಶಿವಾಜಿ ಮಹಾರಾಜರು ಮಹಿಳೆಯರನ್ನು ಗೌರವಿಸುವುದನ್ನು ನಮಗೆ ಕಲಿಸಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ. ಅವರ ಚಿತ್ರವಿರುವ ಪೋಸ್ಟರ್ ಮೇಲೆ ಯಾವುದೇ ಕಲೆಯಿಲ್ಲ. ಆದರೆ, ಅದರ ಪಕ್ಕದಲ್ಲಿರುವ ಹೆಣ್ಣುಮಗಳ ಫೋಟೋ ಮೇಲೆ ಮಾತ್ರ ಗಲೀಜು ಮಾಡಿದ್ದಾರೆ ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸರ್ಕಾರ ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ, ಇಂತಹ ಜನರಿದ್ದರೆ ನಮ್ಮ ದೇಶ 'ವಿಕಸಿತ ಭಾರತ' ಆಗುವುದು ಹೇಗೆ?" ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಇದು ಸಮಾಜದ ವಿಕೃತ ಮನಸ್ಥಿತಿ ಎಂದ ನಟಿ ದಿವ್ಯಾ ಉನ್ನಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಗುಟ್ಕಾ ಉಗುಳಲಾದ ಆ ಜಾಹೀರಾತು ಪೋಸ್ಟರ್‌ನಲ್ಲಿದ್ದವರು ಅಂದರೆ ನಟಿ ದಿವ್ಯಾ ಉನ್ನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಆ ಪೋಸ್ಟರ್‌ನಲ್ಲಿರುವುದು ಕೇವಲ ದಿವ್ಯಾ ಉನ್ನಿ ಅಲ್ಲ, ಅದೊಂದು ಹೆಣ್ಣಿನ ಮುಖ ಅಷ್ಟೇ. ಯಾರು ಬೇಕಾದರೂ ಅಲ್ಲಿರಬಹುದಿತ್ತು. ಈ ಕೃತ್ಯ ನಮ್ಮ ಸಮಾಜದ ಜನರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಇದು ನಿಜಕ್ಕೂ ಅತ್ಯಂತ ನಾಚಿಕೆಗೇಡಿನ ಸಂಗತಿ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ನಡೆಯುವ ಹಿಂಸಾಚಾರ ಮತ್ತು ತಾರತಮ್ಯಗಳಿಗೆ ಹೋಲಿಸಿದರೆ ಪೋಸ್ಟರ್ ಮೇಲೆ ಉಗುಳುವುದು ಸಣ್ಣ ವಿಷಯ ಎನಿಸಿದರೂ, ಇದು ಮಹಿಳೆಯರನ್ನು ದ್ವೇಷಿಸುವ ಅಪಾಯಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

"ಇದು ನಮ್ಮ ಪೀಳಿಗೆಯ ಸಮಸ್ಯೆ. ಗಂಡುಮಕ್ಕಳನ್ನು ಸರಿಯಾಗಿ ಬೆಳೆಸುವವರೆಗೆ ಮತ್ತು ಪುರುಷರು ತಮ್ಮ ಆಲೋಚನಾ ಕ್ರಮ ತಪ್ಪು ಎಂದು ಅರಿತುಕೊಳ್ಳುವವರೆಗೆ ಈ ಸಮಸ್ಯೆ ಬಗೆಹರಿಯುವುದಿಲ್ಲ," ಎಂದು ಹೇಳಿದ್ದಾರೆ.

ನೆಟ್ಟಿಗರ ಆಕ್ರೋಶ ಮತ್ತು ನಾಗರಿಕ ಪ್ರಜ್ಞೆ ಕುರಿತು ಚರ್ಚೆ

ಈ ಘಟನೆಯು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಕೇವಲ ನಾಗರಿಕ ಪ್ರಜ್ಞೆಯ ಕೊರತೆಯಲ್ಲ, ಬದಲಾಗಿ ಮಹಿಳೆಯರ ಮೇಲಿನ ಅಸಹನೆ ಮತ್ತು ದ್ವೇಷ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

"ಮಹಿಳೆ ಯಾರು ಎಂದು ಗೊತ್ತಿಲ್ಲದಿದ್ದರೂ, ಕೇವಲ ಹೆಣ್ಣು ಎಂಬ ಒಂದೇ ಕಾರಣಕ್ಕೆ ಆಕೆಯ ಪೋಸ್ಟರ್‌ಗೆ ಇಷ್ಟೊಂದು ದ್ವೇಷ ವ್ಯಕ್ತವಾಗುತ್ತಿದೆ. ನಾವೆಷ್ಟೇ ಮುಂದುವರಿದರೂ ನಮ್ಮ ಮೂಲಭೂತ ಮನಸ್ಥಿತಿ ಮಾತ್ರ ಬದಲಾಗಿಲ್ಲ," ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅಭಿವೃದ್ಧಿ ಕೇವಲ ಮೂಲಸೌಕರ್ಯಗಳಲ್ಲಿ ಮಾತ್ರವಲ್ಲ, ಜನರ ಮನಸ್ಥಿತಿಯಲ್ಲೂ ಬರಬೇಕಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+