ಅತ್ಯಾಚಾರದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ ಎಂದ ಸಚಿವ; ಸಂಪುಟದಿಂದ ವಜಾ!
ಜೈಪುರ, ಜುಲೈ 22: ಮಹಿಳಾ ಸುರಕ್ಷತೆಯಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ ಎಂದು ರಾಜಸ್ಥಾನವಿಧಾನಸಭೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಧ್ವನಿಯೆತ್ತಿದ್ದ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ.
ಹೌದು, ಕಾಂಗ್ರೆಸ್‌ನಲ್ಲಿನ ಅವರ ಪಕ್ಷದವರೇ ಮಣಿಪುರ ಹಿಂಸಾಚಾರದ ವಿಷಯವನ್ನು ಎತ್ತುತ್ತಿರುವಂತೆಯೇ, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಅವರ ಸ್ವಂತ ಸರ್ಕಾರದ ಯಶಸ್ಸಿನ ಬಗ್ಗೆ ಅಸೆಂಬ್ಲಿಯಲ್ಲಿ ಪ್ರಶ್ನೆಗಳನ್ನು ಹಾಕಿದ ಕೆಲವೇ ಗಂಟೆಗಳ ನಂತರ ರಾಜಸ್ಥಾನದ ಸಚಿವರನ್ನು ವಜಾಗೊಳಿಸಲಾಗಿದೆ.

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭೀಕರ ವೀಡಿಯೋ ಕುರಿತು ಆಕ್ರೋಶ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಕೇವಲ ಒಂದು ದಿನದ ನಂತರ ಸಚಿವರಾದ ರಾಜೇಂದ್ರ ಸಿಂಗ್ ಗುಢಾ ಈ ಹೇಳಿಕೆಯನ್ನ ನೀಡಿದ್ದಾರೆ.
ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಸಂಜೆ ಶಿಫಾರಸು ಮಾಡಿದ್ದಾರೆ ಮತ್ತು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಶಿಫಾರಸನ್ನು ಅಂಗೀಕರಿಸಿದ್ದಾರೆ ಎಂದು ರಾಜಭವನದ ಮಾಹಿತಿಯಿಂದ ತಿಳಿದು ಬಂದಿದೆ.
ರಾಜ್ಯ ವಿಧಾನಸಭೆಯಲ್ಲಿ ರಾಜಸ್ಥಾನದ ಕನಿಷ್ಠ ಆದಾಯ ಖಾತರಿ ಮಸೂದೆ 2023 ರ ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕರು ಮಣಿಪುರದಲ್ಲಿ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿದರು. ಆಗ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರು ತಮ್ಮದೇ ಸರ್ಕಾರದಿಂದ ಆತ್ಮಾವಲೋಕನಕ್ಕೆ ಕರೆ ನೀಡಿದರು.
ಮಹಿಳೆಯರಿಗೆ ಭದ್ರತೆ ನೀಡುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದು ಸತ್ಯ. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೇಗೆ ಹೆಚ್ಚಿವೆ, ಮಣಿಪುರದ ವಿಷಯವನ್ನು ಎತ್ತುವ ಬದಲು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ರಾಜೇಂದ್ರ ಸಿಂಗ್ ಗುಢಾ ವಿಧಾನಸಭೆಯಲ್ಲಿ ಹೇಳಿದರು.
ಈ ವೇಳೆ ಬಿಜೆಪಿಯ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ಸ ಸಂವಿಧಾನದ 164(2)ನೇ ವಿಧಿ ಪ್ರಕಾರ ಸರಕಾರ ಸಾಮೂಹಿಕ ಹೊಣೆಗಾರಿಕೆಯ ಮೇಲೆ ಕೆಲಸ ಮಾಡುತ್ತಿದೆ. ಒಬ್ಬ ಸಚಿವರು ಮಾತನಾಡಿದರೆ ಇಡೀ ಸರಕಾರವೇ ಮಾತನಾಡುತ್ತಿದೆ ಎಂದು ಸಂವಿಧಾನ ಹೇಳುತ್ತದೆ. ಸಚಿವರು ಸರಕಾರವನ್ನು ಬಯಲಿಗೆಳೆದಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಆದರೆ ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಸಂಸತ್ತಿನ ಮುಂಗಾರು ಅಧಿವೇಶನದ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ , ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ, ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು, ಮಣಿಪುರದ ಹೆಣ್ಣುಮಕ್ಕಳಿಗೆ ಆಗಿರುವುದನ್ನ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿನ ಘಟನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಎಲ್ಲಾ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವಂತೆ ನಾನು ಮನವಿ ಮಾಡುತ್ತೇನೆ, ವಿಶೇಷವಾಗಿ ನಮ್ಮ ತಾಯಿ ಮತ್ತು ಸಹೋದರಿಯರ ಬಗ್ಗೆ ಮತ್ತು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ಘೋರ ಅಪರಾಧಗಳ ವಿರುದ್ಧ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಹೇಳಿಕೆಗೆ ಬದ್ಧ ಎಂದ ರಾಜೇಂದ್ರ ಸಿಂಗ್ ಗುಢಾ
ಇನ್ನೂ ವಿಧಾನಸಭೆಯಲ್ಲಿ ನಾನು ಕೊಟ್ಟ ಹೇಳಿಕೆಗೆ ನಾನು ಈಗಲೂ ಬದ್ಧ. ಮಹಿಳಾ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಲೋಪಗಳನ್ನು ಸರಿಪಡಿಸುವ ಬದಲು ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳಾ ದೌರ್ಜನ್ಯಗಳಲ್ಲಿ ರಾಜಸ್ಥಾನ ನಂಬರ್ ಒನ್ ಆಗಿದೆ ಎಂಬುದನ್ನು ಎಲ್ಲಾ ದಾಖಲೆಗಳು ಹೇಳುತ್ತವೆ ಎಂದು ಗುಢಾ ಪುನರುಚ್ಚರಿಸಿದ್ದಾರೆ.












Click it and Unblock the Notifications