Revanth Reddy: ಮಿಲಿಯನೇರ್ ರೈತ ಈಗ ತೆಲಂಗಾಣದ ಸಿಎಂ, ರೇವಂತ್ ರೆಡ್ಡಿ ಆಸ್ತಿ ಎಷ್ಟಿದೆ ಗೊತ್ತಾ?
ಹೈದರಾಬಾದ್, ಡಿಸೆಂಬರ್ 6: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ತನಗೆ ಹೇಳಿಕೊಳ್ಳಲು ಒಂದಾದರೂ ವಿಜಯವನ್ನು ಉಳಿಸಿಕೊಂಡಿದೆ. ಈಗ ರಾಜ್ಯಕ್ಕೆ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆರಿಸಲ್ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಆಸ್ತಿ ಎಷ್ಟಿದೆ ಎಂದು ತಿಳಿಯೋಣ.
2023ರ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಜಯ ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿರುವ ಅನುಮುಲಾ ರೇವಂತ್ ರೆಡ್ಡಿ ಅವರು 2023ರ ಡಿಸೆಂಬರ್ 7ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಬಳಿಯಿರುವ ಆಸ್ತಿ ಮತ್ತು ಸಂಪತ್ತು ಯಾರಿಗಾದರೂ ದೊಡ್ಡ ಆಶ್ಚರ್ಯವನ್ನು ನೀಡುತ್ತದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ರೇವಂತ್ ರೆಡ್ಡಿ ಅವರ ಸಂಪತ್ತು ತೀವ್ರಗತಿಯಲ್ಲಿ ಹೆಚ್ಚಿದೆ. ಅವರ ಚುನಾವಣಾ ಅಫಿಡವಿಟ್‌ನಲ್ಲಿ ಸಂಪತ್ತಿನ ಹೆಚ್ಚಳದ ಜೊತೆಗೆ ಸಾಲಗಳಲ್ಲಿ ದೊಡ್ಡ ಕುಸಿತ ಕಂಡು ಬಂದಿದೆ. ಗಮನಾರ್ಹವಾಗಿ ರೆಡ್ಡಿ ಯಾವುದೇ ಸರ್ಕಾರಿ ಯೋಜನೆ, ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಹೊಂದಿಲ್ಲ. ಅವರ ಪತ್ನಿ ಎಲ್‌ಐಸಿ ಪಾಲಿಸಿ ಹೊಂದಿದ್ದಾರೆ ಅಷ್ಟೇ.
2019 ರಿಂದ 2024 ರ ಹೋಲಿಕೆ:
ಮುಂದಿನ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರೇವಂತ್ ರೆಡ್ಡಿ ಒಟ್ಟು 30.04 ಕೋಟಿ ಆಸ್ತಿ ಹೊಂದಿದ್ದು, ಈ ಪೈಕಿ 5.17 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 24,87,87,500 ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ರೆಡ್ಡಿ ಮತ್ತು ಅವರ ಪತ್ನಿ ಸಂಪತ್ತಿನಲ್ಲಿ ಪಾಲು ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ, ಅವರ ಪತ್ನಿ ಹೊಂದಿರುವ ಸ್ಥಿರಾಸ್ತಿ 15,02,67,225 ರೂ., ಕಾಂಗ್ರೆಸ್ ನಾಯಕ 8,62,33,567 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಮುಂದಿನ ತೆಲಂಗಾಣ ಸಿಎಂ ಆಗಿರುವ ಅವರ ಚರ ಆಸ್ತಿ ಮೌಲ್ಯ 2,18,93,343 ಮತ್ತು ಅವರ ಪತ್ನಿ 2,92,68,008 ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ.

2019 ರ ಲೋಕಸಭೆ ಚುನಾವಣೆಗೆ ರೇವಂತ್ ರೆಡ್ಡಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರೇವಂತ್ ರೆಡ್ಡಿ ಒಟ್ಟು 24,53,57,182 ರೂ ಆಸ್ತಿ ಹೊಂದಿದ್ದು, ಅದು ಈಗ ರೂ 30,04,98,852 ಕ್ಕೆ ಏರಿಕೆಯಾಗಿದೆ. ಎರಡು ಚುನಾವಣಾ ಅಫಿಡವಿಟ್‌ಗಳನ್ನು ಹೋಲಿಕೆ ಮಾಡಿದರೆ, ರೆಡ್ಡಿ ಅವರ ಸಂಪತ್ತು 5,51,41,670 ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಅವರ ಸಾಲಗಳು ಕಡಿಮೆಯಾಗಿದೆ. 2019 ರಲ್ಲಿ ರೇವಂತ್ ರೆಡ್ಡಿ ಅವರ ಸಾಲ 2,93,93,841 ರೂ ಆಗಿದ್ದು, 2023 ರಲ್ಲಿ 1,90,26,339 ರೂ. ಆಗಿತ್ತು.
ರೇವಂತ್ ರೆಡ್ಡಿ ಯಾವುದೇ ಹೂಡಿಕೆ ಮಾಡಿಲ್ಲ:
ರೇವಂತ್ ರೆಡ್ಡಿ ಷೇರು ಮಾರುಕಟ್ಟೆಯಲ್ಲಿ ಯಾವುದೇ ಹಣ ಹೂಡಿಕೆ ಮಾಡಿಲ್ಲ. ಅವರ ಪತ್ನಿ ರಿಯಲ್ ಎಸ್ಟೇಟ್ ಕಂಪನಿಯಲ್ಲಿ 2,16,770 ರೂಪಾಯಿ ಹೂಡಿಕೆ ಮತ್ತು ಎಲ್ ಐಸಿಯ 5 ಲಕ್ಷ ಪಾಲಿಸಿ ಹೊಂದಿದ್ದಾರೆ. ರೆಡ್ಡಿ ಪತ್ನಿ ಬಳಿ 1235 ಗ್ರಾಂ ಚಿನ್ನ ಮತ್ತು 9700 ಗ್ರಾಂ ಬೆಳ್ಳಿ ಇದೆ.
ರೇವಂತ್ ರೆಡ್ಡಿ ಮತ್ತು ಅವರ ಪತ್ನಿ 7.77 ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದು, ಈ ಪೈಕಿ ರೂ. 1.25 ಕೋಟಿ ಎಚ್‌ಯುಎಫ್ ಅಡಿಯಲ್ಲಿದೆ. ಕೃಷಿಯೇತರ ಭೂಮಿಯ ಮೌಲ್ಯ 4.82 ಕೋಟಿ ರೂ.ಗೂ ಹೆಚ್ಚು. ರೆಡ್ಡಿ ದಂಪತಿ ತಲಾ 12.28 ಕೋಟಿ ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ.












Click it and Unblock the Notifications