ಸೇನಾಪಡೆ ಹೆಲಿಕಾಪ್ಟರ್ ಪತನ ಪ್ರಕರಣ: ಗ್ರೂಪ್ ಕ್ಯಾಪ್ಟನ್ ವಜಾ
ಚಂಡೀಗಡ: ಭಾರತೀಯ ವಾಯುಪಡೆ (IAF) ಹೆಲಿಕಾಪ್ಟರ್ ಮೇಲೆ ಸ್ವತಃ ಭಾರತೀಯ ಸೇನೆಯಿಂದಲೇ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರೂಪ್ ಕ್ಯಾಪ್ಟನ್ ಸುಮನ್ ರಾಯ್ ಚೌಧರಿ ವಜಾಗೆ ಜನರಲ್ ಕೋರ್ಟ್ ಮಾರ್ಷಲ್ (GCM) ಆದೇಶಿಸಿದೆ. ಫೆಬ್ರವರಿ 27, 2019 ರಂದು ನಡೆದಿದ್ದ ಘಟನೆಯಲ್ಲಿ 6 ಸೈನಿಕರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದರು.
2019 ಮಾರ್ಚ್ 10ರಂದು ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು. ನಮ್ಮದೇ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಮೇಲೆ ನಮ್ಮದೇ ಸೇನೆಯಿಂದ ಕ್ಷಿಪಣಿ ದಾಳಿ ನಡೆದಿರುವುದು ಸ್ಪಷ್ಟವಾಗಿತ್ತು. 'ಎಂಐ -17' ಹೆಲಿಕಾಪ್ಟರ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಕಾರಣಕ್ಕಾಗಿ ಶ್ರೀನಗರ ಏರ್ ಫೋರ್ಸ್ ಸ್ಟೇಷನ್‌ನ ಆಗಿನ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಗ್ರೂಪ್ ಕ್ಯಾಪ್ಟನ್ ಸುಮನ್ ರಾಯ್ ಚೌಧರಿ ಅವರನ್ನು ವಜಾಗೊಳಿಸಲು ಆದೇಶಿಸಲಾಗಿದೆ. ಕಾಶ್ಮೀರದ ಬುದ್ಗಾಮ್ ಪ್ರದೇಶದಲ್ಲಿ ನಡೆದಿದ್ದ ಘಟನೆಯಲ್ಲಿ 7 ಮಂದಿ ಮೃತಪಟ್ಟು, ₹133 ಕೋಟಿ ನಷ್ಟವಾಗಿತ್ತು.

ಪುಲ್ವಾಮಾ ದಾಳಿ ವೇಳೆ ದುರಂತ
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡಿದ್ದ ಮರುದಿನವೇ ಈ ಘಟನೆ ನಡೆದಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೈನಿಕರ ವಾಹನದ ಮೇಲೆ ದಾಳಿ ನಡೆಸಿದ್ದ ಪರಿಣಾಮ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ನಂತರ ಇದಕ್ಕೆ ಪ್ರತಿಕಾರವಾಗಿ ಭಾರತೀಯ ವಾಯುಪಡೆ ಫೆಬ್ರವರಿ 26, 2019ರಂದು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿತ್ತು. ಭಾರತೀಯ ವಾಯುಪಡೆ ನಡೆಸಿದ್ದ ದಾಳಿಯಲ್ಲಿ ಪಾಕ್‌ನ ಉಗ್ರರ ನೆಲೆಗಳು ಪುಡಿಪುಡಿ ಆಗಿದ್ದವು. ಆದರೆ ಈ ಕಾರ್ಯಾಚರಣೆ ನಡೆದು ಒಂದು ದಿನ ಕಳೆಯುವುದರ ಒಳಗೆ ದುರಂತವೊಂದು ನಡೆದು ಹೋಗಿತ್ತು.
ತಪ್ಪು ನಡೆದಿರುವುದು ದೃಢ?
ಈ ಕುರಿತು ತನಿಖೆ ನಡೆಸಿದ್ದ ಅಧಿಕಾರಿಗಳು, ಅಂದು ನಮ್ಮದೇ ಹೆಲಿಕಾಪ್ಟರ್ ಹೊಡೆದು ಉರುಳಿಸಲು ಕಾರಣವೇನು ಎಂಬುದರ ಬಗ್ಗೆ ಸೂಕ್ತ ಮಾಹಿತಿ ಕಲೆಹಾಕಿದ್ದರು. ಈ ವೇಳೆ ಅಧಿಕಾರಿಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೇ ಇರುವುದೇ ಈ ದುರ್ಘಟನೆಗೆ ಕಾರಣ ಎಂದು ದೃಢಪಡಿಸಿಕೊಳ್ಳಲಾಗಿತ್ತು. ಹೀಗಾಗಿ ವಿಚಾರಣೆ ನಡೆಸಿದ ಜನರಲ್ ಕೋರ್ಟ್ ಮಾರ್ಷಲ್ ಅಥವಾ ಮಿಲಿಟರಿ ನ್ಯಾಯಲಯ ಗ್ರೂಪ್ ಕ್ಯಾಪ್ಟನ್ ಸುಮನ್ ರಾಯ್ ಚೌಧರಿ ಅವರನ್ನು ವಜಾಗೊಳಿಸಲು ಆದೇಶಿದೆ.

6 ಸೈನಿಕರು ಹುತಾತ್ಮರಾಗಿದ್ದರು
Mi-17 ಕಾಪ್ಟರ್ ಮೇಲೆ ಕ್ಷಿಪಣಿ ದಾಳಿ ಪ್ರಕರಣದಲ್ಲಿ ಭಾರತೀಯ ವಾಯುಪಡೆಯ 6 ಸೈನಿಕರು ಮೃತಪಟ್ಟಿದ್ದರು. ಪೈಲಟ್‌ಗಳಾದ ಎಸ್. ವಶಿಷ್ಟ್, ಎಂ. ನಿನಂದ್ ಸೇರಿದಂತೆ ವಿ.ಕೆ. ಪಾಂಡೆ, ವಿಕ್ರಾಂತ್ ಸಹರಾವತ್, ಪಂಕಜ್ ಕುಮಾರ್ ಹಾಗೂ ಡಿ. ಪಾಂಡೆ ಹುತಾತ್ಮರಾಗಿದ್ದರು. ಇವರ ಜೊತೆಗೆ ಓರ್ವ ನಾಗರಿಕ ಕೂಡ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ. ಸ್ಥಳೀಯ ಮಟ್ಟದಲ್ಲೂ ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ವಾಯುಪಡೆ ಸಿಬ್ಬಂದಿಯಿಂದ ಆದ ಎಡವಟ್ಟು 7 ಜನರ ಸಾವಿಗೆ ಕಾರಣವಾಗಿದ್ದನ್ನು 2019ರ ಅಕ್ಟೋಬರ್‌ನಲ್ಲೇ ಒಪ್ಪಿಕೊಂಡಿದ್ದರು ಭಾರತೀಯ ವಾಯುಪಡೆ ಮುಖ್ಯಸ್ಥರು. ಕಾಶ್ಮೀರದ ಬುದ್ಗಾಮ್ ಪ್ರದೇಶದಲ್ಲಿ ನಡೆದ ದುರ್ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ನಂತರ ಈ ಕುರಿತು ಉನ್ನತಮಟ್ಟದ ತನಿಖೆಗೂ ಆದೇಶ ನೀಡಲಾಗಿತ್ತು. ಇದೀಗ ವಿಚಾರಣೆ ಮುಗಿದು ಜನರಲ್ ಕೋರ್ಟ್ ಮಾರ್ಷಲ್ ಆದೇಶ ನೀಡಿದೆ. ಈ ಮೂಲಕ 4 ವರ್ಷಗಳ ಹಿಂದಿನ ಪ್ರಕರಣಕ್ಕೆ ಒಂದು ಕನ್‌ಕ್ಲೂಷನ್ ಸಿಕ್ಕಂತಾಗಿದೆ.












Click it and Unblock the Notifications