ಅತ್ಯಾಚಾರ ಪ್ರಕರಣ ಖಂಡಿಸಿ ಕಾಂಗ್ರೆಸ್ಸಿನಿಂದ ಮಧ್ಯರಾತ್ರಿ ಪ್ರತಿಭಟನೆ
ನವದೆಹಲಿ, ಏಪ್ರಿಲ್ 13: ಉತ್ತರ ಪ್ರದೇಶದ ಉನ್ನಾವೋ ಮತ್ತು ಜಮ್ಮು-ಕಾಶ್ಮೀರದ ಕತುವಾದಲ್ಲಿ ಅಪ್ರಾಪ್ತೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮಧ್ಯರಾತ್ರಿ ಧರಣಿ ನಡೆಸಿದರು.
ದೆಹಲಿಯ ಇಂಡಿಯಾ ಗೇಟ್ ಬಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಮುಂದಾಳತ್ವದಲ್ಲಿ ಹಲವು ಕಾಂಗ್ರೆಸ್ ಮುಖಂಡರು ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರೂ ಪಾಲ್ಗೊಂಡು, ಮೊಂಬತ್ತಿ ಬೆಳಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಈ ಪ್ರತಿಭಟನೆ ರಾಜಕೀಯ ಉದ್ದೇಶದ್ದಲ್ಲ, ಇದೊಂದು ರಾಷ್ಟ್ರೀಯ ವಿಷಯ, 'ಬೇಟಿ ಬಚಾವೋ' ಎನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಬದ್ಧವಾಗಿಲ್ಲ" ಎಂದು ಆವರು ಕಿಡಿಕಾರಿದರು.

'ಭಾರತದಲ್ಲಿ ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕೇ ಹೆದರುತ್ತಿದ್ದಾರೆ. ಎಲ್ಲಿ ನೋಡಿದರೂ ಅತ್ಯಾಚಾರ, ಕೊಲೆಯ ಸುದ್ದಿ ಕೇಳುತ್ತಿದೆ. ಇಂಥ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಹೇಗೆ ಹೇಳುವುದು' ಎಂದು ಅವರು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್, ಅಜಯ್ ಮಕೆನ್ ಮುಂತಾದವರಿದ್ದರು.
ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್ ಅಪ್ರಾಪ್ತೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದು ಈ ಪ್ರಕರಣವನ್ನು ಈಗಾಗಲೇ ಸಿಬಿಐ ಗೆ ವಹಿಸಲಾಗಿದೆ. ಇಂದು ಬೆಳಿಗ್ಗೆಯಷ್ಟೇ ಸೆನ್ಗಾರ್ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

ಜಮ್ಮು ಕಾಶ್ಮೀರದ ಕತುವಾ ಎಂಬಲ್ಲಿ ಜನವರಿ ತಿಂಗಳಿನಲ್ಲಿ ಒಂಬತ್ತು ವರ್ಷದ ಮಗುವನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ನ್ಯಾಯ ನೀಡುವಂತೆ ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications