Mettur Dam: 5 ದಿನಗಳಲ್ಲಿ 30 ಅಡಿ ಭರ್ತಿಯಾದ ಮೆಟ್ಟೂರು ಜಲಾಶಯ
ಕರ್ನಾಟಕ, ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿರುವ ರಾಜ್ಯದ ಜಲಾಶಯಗಳು ಭರ್ತಿಯಾಗಿದ್ದು ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಮೆಟ್ಟೂರು ಜಲಾಶಯ ಕೆಲವು ದಿನಗಳಲ್ಲೇ ಭಾರಿ ಪ್ರಮಾಣದ ನೀರು ಪಡೆದುಕೊಂಡಿದೆ.

5 ದಿನಗಳಲ್ಲಿ 30 ಅಡಿ ನೀರು
ಕಬಿನಿ, ನುಗು ಜಲಾಶಯದಿಂದ ನೀರು ಬಿಟ್ಟ ಬಳಿಕ ಈಗ ಕೆಆರ್ ಎಸ್ ಜಲಾಶಯದಿಂದ ಕೂಡ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ಮೆಟ್ಟೂರು ಜಲಾಶಯದ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.
ಜುಲೈ 17 ರಂದು 47 ಅಡಿ ಇದ್ದ ಮೆಟ್ಟೂರು ಜಲಾಶಯದ ನೀರಿನ ಮಟ್ಟ ಜುಲೈ 22ರ ವೇಳೆಗೆ 76 ಅಡಿಗೆ ಏರಿಕೆಯಾಗಿದೆ. ಅಂದರೆ 5 ದಿನಗಳಲ್ಲಿ ಸುಮಾರು 30 ಅಡಿ ಹೆಚ್ಚಳವಾಗಿದೆ.
ಸೋಮವಾರ ಮೆಟ್ಟೂರು ಜಲಾಶಯದ ಒಳಹರಿವು 70,600 ಕ್ಯೂಸೆಕ್ಸ್ ಇದ್ದು, 1000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. 120 ಅಡಿ ಗರಿಷ್ಠ ಎತ್ತರ ಹೊಂದಿರುವ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 76 ಅಡಿಗಳಷ್ಟಾಗಿದೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಲಿದ್ದು, ತಮಿಳುನಾಡಿಗೆ ಮತ್ತಷ್ಟು ನೀರು ಹರಿಯಲಿದೆ. ಮೆಟ್ಟೂರು ಜಲಾಶಯದ ಒಳಹರಿವು ಮಂಗಳವಾರದ ವೇಳೆಗೆ 80,000 ಕ್ಯೂಸೆಕ್ಸ್ ದಾಟುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಕೆಆರ್ ಎಸ್ ಜಲಾಶಯ ಭರ್ತಿ
ಕೃಷ್ಣರಾಜಸಾಗರ ಜಲಾಶಯ ಕೂಡ ಭರ್ತಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 60,016 ಕ್ಯೂಸೆಕ್ಸ್ ಒಳಹರಿವು ಇದ್ದು, 50,801 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟವಾಗಿದ್ದು, ಇಂದಿನ ನೀರಿನ ಮಟ್ಟ 123.20 ಅಡಿಗಳಷ್ಟಿದೆ.
ಕಬಿನಿ ಜಲಾಶಯ ಕೂಡ ಭರ್ತಿಯಾಗಿದ್ದು 17375 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 16,400 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 18.49 ಟಿಎಂಸಿ ನೀರು ಸಂಗ್ರಹವಾಗಿದೆ.
ಅಂತೂ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತಮಿಳುನಾಡಿನ ನೀರಿನ ಕ್ಯಾತೆ ಸದ್ಯಕ್ಕೆ ತಪ್ಪಿದಂತಾಗಿದೆ. ತಮಿಳುನಾಡು ಕೇಳಿದ್ದಕ್ಕಿಂತ ಹೆಚ್ಚಿನ ನೀರನ್ನು ಬಿಡಲಾಗಿದೆ.












Click it and Unblock the Notifications