Mettur Dam: 100 ಅಡಿ ಭರ್ತಿಯಾದ ಮೆಟ್ಟೂರು ಜಲಾಶಯ; ಒಳಹರಿವು ಎಷ್ಟಿದೆ?
ಕರ್ನಾಟಕದಲ್ಲಿ ಮತ್ತೆ ಮಳೆ ಹೆಚ್ಚಾಗಿದ್ದು ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ರಾಜ್ಯದ ಪ್ರಮುಖ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿವೆ. ರಾಜ್ಯದ ಕಾವೇರಿ ನದಿ ಪಾತ್ರದ ಜಲಾಶಯಗಳು ಭರ್ತಿಯಾಗಿದ್ದು, ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಮೆಟ್ಟೂರು ಜಲಾಶಯದ ಒಳಹರಿವು ದಿನೇ ದಿನೇ ಹೆಚ್ಚಾಗುತ್ತಿದ್ದು ಭಾರಿ ಪ್ರಮಾಣದಲ್ಲಿ ನೀರು ಸಂಗ್ರವಾಗುತ್ತಿದೆ. ಜುಲೈ 16 ರಂದು ಕೇವಲ 45 ಅಡಿಗಳಷ್ಟಿದ್ದ ನೀರಿನ ಮಟ್ಟ 11 ದಿನಗಳಲ್ಲಿ 100 ಅಡಿಗೆ ಏರಿಕೆಯಾಗಿದೆ. ಈಗಾಗಲೇ ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿರುವ ಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಲಿದ್ದು, ಕೆಲವೇ ದಿನಗಳಲ್ಲಿ ಮೆಟ್ಟೂರು ಜಲಾಶಯ ಕೂಡ ಭರ್ತಿಯಾಗಲಿದೆ.

ಮೆಟ್ಟೂರು ಜಲಾಶಯದ ನೀರಿನ ಮಟ್ಟ
ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ ಮೆಟ್ಟೂರು ಜಲಾಶಯದ ನೀರಿನ ಮಟ್ಟ 99.110 ಅಡಿಗಳಿಷ್ಟಾಗಿದ್ದು, 93,828 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದ್ದು, ಇದೇ ರೀತಿ ಒಳಹರಿವು ಇದ್ದರೆ 24 ಗಂಟೆಗಳಲ್ಲೇ ಸುಮಾರು 8 ಟಿಎಂಸಿ ನೀರು ಮೆಟ್ಟೂರು ಜಲಾಶಯ ಸೇರಲಿದೆ.
ಮೆಟ್ಟೂರು ಜಲಾಶಯದ ಗರಿಷ್ಠ ನೀರಿನ ಮಟ್ಟ 120 ಅಡಿಗಳಾಗಿದ್ದು, ಇಂದು 100 ಅಡಿಗೆ ತಲುಪಿದೆ. ಜಲಾಶಯದ ಭರ್ತಿಯಾಗಲು ಇನ್ನು 20 ಅಡಿಗಳಷ್ಟು ತುಂಬಬೇಕಿದ್ದು, ಆಗಸ್ಟ್ ಮೊದಲ ವಾರದ ವೇಳೆಗೆ ಜಲಾಶಯ ಭರ್ತಿಯಾಗುವುದು ಬಹುತೇಕ ಖಚಿತವಾಗಿದೆ. ಸದ್ಯ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ನದಿಗೆ ನೀರು ಹರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೆಆರ್ ಎಸ್ ಜಲಾಶಯದಿಂದ 1.12 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಕಬಿನಿ ಜಲಾಶಯದಿಂದ 30,000 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಬಿಳಿಗುಂಡ್ಲುವಿನಲ್ಲಿ ಸದ್ಯ 1.15 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿರುವುದು ದಾಖಲಾಗಿದೆ.












Click it and Unblock the Notifications