ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ಸಮನ್ಸ್ ನೀಡಲು ಸಂಸದೀಯ ಸಮಿತಿ ನಿರ್ಧಾರ
2024ರ ಲೋಕಸಭಾ ಚುನಾವಣೆಯ ಕುರಿತಂತೆ ಸುಳ್ಳು ಹೇಳಿಕೆ ನೀಡಿರುವ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌ಗೆ ಸಮನ್ಸ್ ನೀಡಲು ಸಂಸದೀಯ ಸ್ಥಾತಿ ಸಮಿತಿ ನಿರ್ಧರಿಸಿದೆ. ತಪ್ಪು ಮಾಹಿತಿ ಹರಡಿದ ಕಾರಣಕ್ಕಾಗಿ ಮೆಟಾಗೆ ಸಮನ್ಸ್ ನೀಡಲಾಗುವುದು ಎಂದು ಬಿಜೆಪಿ ಸಂಸದ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸದನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಮಾಹಿತಿ ನೀಡಿದ್ದಾರೆ.
"ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ದೇಶದ ಬಗ್ಗೆ ತಪ್ಪಾಗಿ ಮಾಹಿತಿ ನೀಡುವುದು ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತದೆ. ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಮೆಟಾ ಸಂಸ್ಥೆ ಸಂಸತ್ತು ಮತ್ತು ಭಾರತೀಯರ ಕ್ಷಮೆ ಯಾಚಿಸಬೇಕು" ಎಂದು ನಿಶಿಕಾಂತ್ ದುಬೆ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಜುಕರ್‌ಬರ್ಗ್ ಹೇಳಿದ್ದೇನು?
ಜನವರಿ 10ರಂದು ಪ್ರಸಾರವಾದ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ "ಕೋವಿಡ್ ಸಾಂಕ್ರಾಮಿಕವು ಜಗತ್ತಿನಾದ್ಯಂತ ಅಧಿಕಾರದಲ್ಲಿರುವ ಸರ್ಕಾರಗಳ ಮೇಲೆ ಜನರ ನಂಬಿಕೆ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಿದರು. 2024ರಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ನಡೆದಿದೆ, ಅಧಿಕಾರದಲ್ಲಿದ್ದ ಪಕ್ಷಗಳು ಎಲ್ಲಾ ಕಡೆ ಸೋತಿವೆ. ಹಣದುಬ್ಬರ ಅಥವಾ ಕೋವಿಡ್ ಅನ್ನು ಸರ್ಕಾರಗಳು ಹೇಗೆ ನಿಭಾಯಿಸಿದವು ಎನ್ನುವುದು ಸೋಲಿಗೆ ಕಾರಣವಾಗಿರಬಹುದು. ಜಾಗತಿಕ ಮಟ್ಟದಲ್ಲಿ ಇದು ಪರಿಣಾಮ ಬೀರಿದೆ ಎನಿಸುತ್ತಿದೆ" ಎಂದು ಅವರು ಹೇಳಿದ್ದರು.
ಮಾರ್ಕ್ ಜುಕರ್‌ಬರ್ಗ್ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ಉದಾಹರಣೆಯನ್ನು ತಪ್ಪಾಗಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. 2024ರಲ್ಲಿ ನಡೆದ ಲೋಕಸಭಾ ಚುನಾವಣೆ ಆಡಳಿತಾರೂಢ ಎನ್‌ಡಿಎ ಒಕ್ಕೂಟ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಅಶ್ವಿನಿ ವೈಷ್ಣವ್ ಅಸಮಾಧಾನ
ಜುಕರ್‌ಬರ್ಗ್ ಹೇಳಿಕೆಗೆ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ 64 ಕೋಟಿ ಭಾರತೀಯರು ಮತದಾನ ಮಾಡಿದ್ದಾರೆ. ಭಾರತದ ಜನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್‌ಡಿಎ ಮೇಲೆ ನಂಬಿಕೆಯಿಟ್ಟು ಮತ್ತೊಂದು ಅವಕಾಶ ಕೊಟ್ಟಿದ್ದಾರೆ. 2024 ರ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿರುವ ಸರ್ಕಾರಗಳು ಕೋವಿಡ್ ನಂತರ ಸೋತಿವೆ ಎಂಬ ಜುಕರ್‌ಬರ್ಗ್ ಅವರ ಹೇಳಿಕೆ ಸುಳ್ಳು" ಎಂದು ಹೇಳಿದ್ದಾರೆ.












Click it and Unblock the Notifications