ಅಮೆರಿಕದಲ್ಲಿ ಮೆಟಾ, ಅಮೆಜಾನ್‌ ಉದ್ಯೋಗ ಕಡಿತ: ಭಾರತೀಯ ಹೆಚ್-1ಬಿ ವೀಸಾದಾರರಿಗೆ ಶುರುವಾಯ್ತು 60 ದಿನಗಳ ಕೌಂಟ್‌ಡೌನ್

ವಾಷಿಂಗ್ಟನ್: ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಇದೀಗ ಉದ್ಯೋಗ ಕಡಿತದ ಹೊಸ ಅಲೆಯೊಂದು ಎದ್ದಿದ್ದು, ಇದು ಎಚ್-1ಬಿ (H-1B) ವೀಸಾ ಹೊಂದಿರುವ ಸಾವಿರಾರು ಭಾರತೀಯ ವೃತ್ತಿಪರರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಉದ್ಯೋಗ ಕಳೆದುಕೊಂಡ ಕ್ಷಣದಿಂದಲೇ ಅಮೆರಿಕದ ವಲಸೆ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಾದ 60 ದಿನಗಳ ಗ್ರೇಸ್ ಪೀರಿಯಡ್ ಕೌಂಟ್‌ಡೌನ್ ಶುರುವಾಗಲಿದ್ದು, ಭಾರತೀಯ ಟೆಕ್ಕಿಗಳು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

ಮೆಟಾ, ಅಮೆಜಾನ್ ಸೇರಿ ಹಲವು ಕಂಪನಿಗಳಲ್ಲಿ ಲೇಆಫ್

ಮೆಟಾ, ಅಮೆಜಾನ್ ಮತ್ತು ಒರಾಕಲ್‌ನಂತಹ ಜಾಗತಿಕ ದೈತ್ಯ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಲೇ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಕ್ರಮದಿಂದಾಗಿ ಕಂಪನಿಗಳಿಂದ ಎಚ್-1ಬಿ ಪ್ರಾಯೋಜಕತ್ವ ಪಡೆದಿದ್ದ ಅನೇಕ ಭಾರತೀಯ ಉದ್ಯೋಗಿಗಳು ಈಗ ಕೆಲಸ ಕಳೆದುಕೊಳ್ಳುವಂತಾಗಿದೆ.

Meta

ಎಚ್-1ಬಿ ವೀಸಾದಾರರಿಗೆ, ಅಮೆರಿಕದಲ್ಲಿ ಅವರ ಕಾನೂನುಬದ್ಧ ವಾಸ್ತವ್ಯವು ಅವರ ಉದ್ಯೋಗದೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಹೀಗಾಗಿ, ಒಮ್ಮೆ ಉದ್ಯೋಗ ಕಳೆದುಕೊಂಡರೆ, ಅವರು ಹೊಸ ಪ್ರಾಯೋಜಕರನ್ನು ಹುಡುಕಲು, ವೀಸಾ ವರ್ಗವನ್ನು ಬದಲಾಯಿಸಲು ಅಥವಾ ದೇಶವನ್ನು ತೊರೆಯಲು ಅತ್ಯಂತ ಸೀಮಿತ ಕಾಲಾವಕಾಶವನ್ನು ಮಾತ್ರ ಹೊಂದಿರುತ್ತಾರೆ. 60 ದಿನಗಳ ಈ ನಿಯಮವು ಈಗ ಅನೇಕರ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಘಟ್ಟವಾಗಿದೆ.

60 ದಿನಗಳ ಗಡುವು

ಅಮೆರಿಕದ ವಲಸೆ ನಿಯಮಗಳ ಪ್ರಕಾರ, ಕೆಲಸದಿಂದ ವಜಾಗೊಂಡ ಎಚ್-1ಬಿ ಉದ್ಯೋಗಿಗಳಿಗೆ ತಮ್ಮ ವೀಸಾವನ್ನು ವರ್ಗಾಯಿಸಲು ಸಿದ್ಧರಿರುವ ಹೊಸ ಉದ್ಯೋಗದಾತರನ್ನು ಹುಡುಕಲು ಅಥವಾ ತಮ್ಮ ವಲಸೆ ಸ್ಥಾನಮಾನವನ್ನು ಬದಲಾಯಿಸಿಕೊಳ್ಳಲು ಗರಿಷ್ಠ 60 ದಿನಗಳ ಕಾಲಾವಕಾಶವನ್ನು ಮಾತ್ರ ನೀಡಲಾಗುತ್ತದೆ. ಈ 60 ದಿನಗಳಲ್ಲಿ ಮೇಲಿನ ಎರಡೂ ಪ್ರಕ್ರಿಯೆಗಳು ನಡೆಯದಿದ್ದರೆ, ಅವರು ಅಮೆರಿಕವನ್ನು ತೊರೆಯುವುದು ಅನಿವಾರ್ಯವಾಗುತ್ತದೆ. ಆದರೆ ಪ್ರಸ್ತುತ ನೇಮಕಾತಿಗಳು ಕುಸಿದಿರುವ ಈ ಸಂದರ್ಭದಲ್ಲಿ, ಇದು ಉದ್ಯೋಗ ಕಳೆದುಕೊಂಡವರಿಗೆ ಬಹುದೊಡ್ಡ ತಡೆಯಾಗಿ ಪರಿಣಮಿಸಿದೆ. ಹೊಸ ಉದ್ಯೋಗಕ್ಕಾಗಿ ಸಾವಿರಾರು ಜನರು ಸ್ಪರ್ಧಿಸುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ.

ಬಿ-2 ವೀಸಾ ಹಾಗೂ ದಾಖಲೆಗಳ ಒತ್ತಡ

ಹೊಸ ಉದ್ಯೋಗ ಹುಡುಕಾಟದ ಜೊತೆಗೆ, ವಜಾಗೊಂಡಿರುವ ಕೆಲವು ಉದ್ಯೋಗಿಗಳು ಬಿ-2 ವಿಸಿಟರ್ ವೀಸಾಗೆ ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸಹ ಪರಿಶೀಲಿಸುತ್ತಿದ್ದಾರೆ. ಈ ವೀಸಾ ವರ್ಗವು ವ್ಯಕ್ತಿಗಳಿಗೆ ಯಾವುದೇ ಉದ್ಯೋಗವಿಲ್ಲದೆ ತಾತ್ಕಾಲಿಕ ಅವಧಿಗೆ ಅಮೆರಿಕದಲ್ಲಿ ಉಳಿಯಲು ಅವಕಾಶ ನೀಡುತ್ತದೆ. ಆದರೆ, ಈ ವೀಸಾದಲ್ಲಿ ಯಾವುದೇ ಆದಾಯ ತರುವ ಕೆಲಸ ಮಾಡಲು ಅನುಮತಿ ಇರುವುದಿಲ್ಲ. ಕಾನೂನುಬದ್ಧವಾಗಿ ಅಲ್ಲಿ ಉಳಿದುಕೊಂಡು ಉದ್ಯೋಗ ಹುಡುಕಾಟವನ್ನು ಮುಂದುವರಿಸಲು ಇದೊಂದು ಅಲ್ಪಾವಧಿಯ ಕ್ರಮವೆಂದು ಪರಿಗಣಿಸಲಾಗಿದೆ. ಹೊಸ ಕೆಲಸ ಹುಡುಕುವುದು ಜೊತೆಗ, ವೀಸಾ ಸ್ಟೇಟಸ್ ಬದಲಾವಣೆಗೆ ಸಂಬಂಧಿಸಿದ ದಾಖಲೆಗಳ ಪ್ರಕ್ರಿಯೆಗಳು ಸಾಕಷ್ಟು ಸಮಯ ತಗೆದುಕೊಳ್ಳುತ್ತಿದೆ. ಈ ಪ್ರಕ್ರಿಯೆಗಳು ಈಗಾಗಲೇ ಒತ್ತಡದಲ್ಲಿರುವ ಉದ್ಯೋಗಿಗಳ ಮೇಲೆ ಇನ್ನಷ್ಟು ಹೊರೆಯನ್ನು ಹಾಕುತ್ತಿವೆ.

ಪ್ರಸ್ತುತ ಟೆಕ್ ವಲಯದಲ್ಲಿ ನೇಮಕಾತಿ ಗಣನೀಯವಾಗಿ ಕುಸಿತ ಕಂಡಿದ್ದು, ಉದ್ಯೋಗದಾತರ ಪ್ರಾಯೋಜಕತ್ವವನ್ನು ಅವಲಂಬಿಸಿರುವ ವೀಸಾದಾರರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಕಡಿಮೆ ಉದ್ಯೋಗಾವಕಾಶಗಳು ಮತ್ತು ದೀರ್ಘಕಾಲದ ನೇಮಕಾತಿ ಪ್ರಕ್ರಿಯೆಗಳ ಕಾರಣದಿಂದಾಗಿ, 60 ದಿನಗಳ ಗಡುವಿನೊಳಗೆ ಹೊಸ ಕೆಲಸ ಗಿಟ್ಟಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಬಹುತೇಕ ಭಾರತೀಯ ವೃತ್ತಿಪರರಿಗೆ, ಒಂದೆಡೆ ಉದ್ಯೋಗ ಕಡಿತ ಮತ್ತು ಮತ್ತೊಂದೆಡೆ ವಲಸೆ ನಿಯಮಗಳ ಗಡುವು ಅಕ್ಷರಶಃ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸಿದೆ. ನಿಗದಿತ ಸಮಯದೊಳಗೆ ಉದ್ಯೋಗ ನಿಯೋಜನೆ ಅಥವಾ ವೀಸಾ ಸ್ಥಾನಮಾನ ಬದಲಾವಣೆಯ ಅನುಮೋದನೆಯ ಮೇಲೆ ಮಾತ್ರ ಇವರ ಭವಿಷ್ಯ ನಿಂತಿದೆ. ಕೆಲಸ ಕಳೆದುಕೊಂಡ ಅನೇಕರು ತಮ್ಮ ಕುಟುಂಬ ಹಾಗೂ ಆರ್ಥಿಕ ಜವಾಬ್ದಾರಿಗಳ ನಡುವೆ ಅಮೆರಿಕದ ನೆಲದಲ್ಲಿ ಅತಂತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+