ಮೇಘಾಲಯ ಸಿಎಂಗೆ 'ಅರ್ಹ ನಿರುದ್ಯೋಗಿ ಯುವಕರ ಭಯೋತ್ಪಾದಕ ಗುಂಪು' ಬೆದರಿಕೆ ಮೇಲ್
ಶಿಲಾಂಗ್, ಏಪ್ರಿಲ್ 07: ಕಾನೂನುಬಾಹಿರವಾದ ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಹೆಚ್‌ಎನ್‌ಎಲ್‌ಸಿ) ಬ್ಯಾನ್ ಮಾಡಿದ ವಾರಗಳ ನಂತರ ಮೇಘಾಲಯದಲ್ಲಿ ಹೊಸ "ಭಯೋತ್ಪಾದಕ" ಗುಂಪೊಂದು ಸಜ್ಜಾಗಿದೆ. ಈ 'ಅರ್ಹ ನಿರುದ್ಯೋಗಿ ಯುವಕರ ಭಯೋತ್ಪಾದಕ ಗುಂಪು' ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾಗೆ ಬೆದರಿಕೆಯ ಇಮೇಲ್ ಕಳುಹಿಸಿದೆ.
ಲಾವಿ ಬಾ ಫಿರ್ನೈ ಎಂಬ ಗುಂಪು 37 "ಅರ್ಹ ನಿರುದ್ಯೋಗಿ ಯುವಕರು" ರಚಿಸಿದ "ಭಯೋತ್ಪಾದನಾ ಗುಂಪು" ಎಂದು ಗುರುತಿಸಿಕೊಂಡಿದ್ದು, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿದ್ದಾರೆ.
ಈ ಇಮೇಲ್‌ನಲ್ಲಿ ಮೇ 1 ರಿಂದ ಪ್ರತಿ ವಾರ ಶಿಕ್ಷಣ ಸಂಸ್ಥೆಗಳ ಮೇಲೆ ಸರಣಿ ಬಾಂಬ್ ದಾಳಿಯ ಬೆದರಿಕೆಯನ್ನು ಹಾಕಿದ್ದಾರೆ. ಈ ಬಗ್ಗೆ ಸದ್ಯ ಮೇಘಾಲಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಶಾಲಾ, ಕಾಲೇಜು ಬಾಂಬ್ ದಾಳಿ ಟಾರ್ಗೆಟ್
ಇನ್ನು ಅರ್ಹ ನಿರುದ್ಯೋಗಿ ಯುವಕರು" ರಚಿಸಿದ ಭಯೋತ್ಪಾದನಾ ಗುಂಪಿನ ಟಾರ್ಗೆಟ್ ಪಟ್ಟಿಯಲ್ಲಿ ಮೇಘಾಲಯ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಕಟ್ಟಡ ಮತ್ತು ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯವಿದೆ ಎಂದು ವರದಿ ಉಲ್ಲೇಖ ಮಾಡಿದೆ.
"ನೀವು ಮತ್ತು ನಿಮ್ಮ ಸರ್ಕಾರವು ಅಲ್ಲಿರುವ ಪ್ರತಿಯೊಬ್ಬ ಮೇಘಾಲಯನ್‌ಗೆ ಉದ್ಯೋಗ ನೀಡಲು ಪರಿಹಾರವನ್ನು ನೀಡುವವರೆಗೆ ನಾವು ಬಾಂಬ್‌ಗಳನ್ನು ಅಲ್ಲಲ್ಲಿ ಇಡುತ್ತೇವೆ," ಎಂದು ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ.
ನಿಷೇಧಿತ ಎಚ್‌ಎನ್‌ಎಲ್‌ಸಿಯೊಂದಿಗೆ ಮಾತುಕತೆ ಬೇಷರತ್ತಾಗಿರುತ್ತದೆ ಎಂದು ರಾಜ್ಯ ಗೃಹ ಸಚಿವ ಲಖ್‌ಮೆನ್ ರಿಂಬುಯಿ ಹೇಳಿದ ಕೂಡಲೇ ಪೊಲೀಸರು ಪತ್ರವನ್ನು ಬಹಿರಂಗಪಡಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications