ಬೋಯಿಂಗ್ 777 ವಿಮಾನ ಚಲಾಯಿಸುವ ಕ್ಯಾಪ್ಟನ್ ದಿವ್ಯಾ!
ನವದೆಹಲಿ, ಜುಲೈ 09: ಭಾರತದ ಮಹಿಳಾ ಶಕ್ತಿಯನ್ನು ವಿಶ್ವಕ್ಕೆ ಸಾರುವ ಸ್ಫೂರ್ತಿ ಕಥೆ ಇಲ್ಲಿದೆ. ದೈತ್ಯ ವಿಮಾನ ಬೋಯಿಂಗ್ 777 ಚಾಲನೆ ಮಾಡುವ ವಿಶ್ವ ಅತ್ಯಂತ ಕಿರಿಯಾ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಭಾರತದ ಕ್ಯಾಪ್ಟನ್ ಆನಿ ದಿವ್ಯಾ ಪಾತ್ರರಾಗಿದ್ದಾರೆ.
ತಮ್ಮ 30ನೇ ವಯಸ್ಸಿನಲ್ಲೇ ಮಹಿಳಾ ಕಮಾಂಡರ್ ದಿವ್ಯಾ ಅವರು ಬೋಯಿಂಗ್ 777 ವಿಮಾನದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎನಿಸಿಕೊಂಡಿದ್ದಾರೆ.
ಪಂಜಾಬಿನ ಕುಗ್ರಾಮ ಮೂಲದ ದಿವ್ಯಾ ಅವರ ತಂದೆ ನಿವೃತ್ತ ಸೇನಾಧಿಕಾರಿಯಾಗಿದ್ದಾರೆ. ಪಠಾಣ್ ಕೋಟ್ ಬಳಿ ಜನಿಸಿದ ದಿವ್ಯಾ ಅವರು ನಂತರ ಬೆಳೆದಿದ್ದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಎಂಬುದು ವಿಶೇಷ.
ಇಂಗ್ಲೀಷ್ ಬರುತ್ತಿರಲಿಲ್ಲ: ಪಂಜಾಬಿ ಕುಟುಂಬದ ದಿವ್ಯಾ ಅವರಿಗೆ ಸ್ಥಳೀಯ ಭಾಷೆ ತೆಲುಗು ಚೆನ್ನಾಗಿ ಒಗ್ಗಿಕೊಂಡಿತ್ತು. ಚಿಕ್ಕಂದಿನಿಂದಲೇ ಪೈಲಟ್ ಆಗುವ ಕನಸು ಇತ್ತಾದರೂ, ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಆದರೆ, ಛಲಬಿಡದೆ 17ನೇ ವಯಸ್ಸಿನಲ್ಲಿ ಉತ್ತರಪ್ರದೇಶದ ವೈಮಾನಿಕ ತರಬೇತಿ ಕೇಂದ್ರಕ್ಕೆ ಪ್ರವೇಶ ಪಡೆದುಕೊಂಡರು.
ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೆ. ಬಳಿಕ ಸತತವಾಗಿ ಅಭ್ಯಾಸದ ಮೂಲಕ ಆಂಗ್ಲ ಭಾಷೆಯನ್ನು ಕಲಿತೆ. ಆದರೆ, ನನ್ನ ಪೋಷಕರು ಮತ್ತು ಸ್ನೇಹಿತರ ನೆರವಿನಿಂದಾಗಿ, ಎಲ್ಲ ತಡೆಗಳನ್ನು ಮೆಟ್ಟಿ ಪೈಲಟ್ ಆಗಿದ್ದೇನೆ. ನನ್ನ ತರಬೇತಿ ಅಕಾಡೆಮಿ ಕೂಡ ನನ್ನನ್ನು ಸಾಕಷ್ಟು ಪ್ರೋತ್ಸಾಹಿಸಿತು ಎಂದು ದಿವ್ಯಾ ಹೇಳಿದ್ದಾರೆ.
19ನೇ ವಯಸ್ಸಿನಲ್ಲಿ ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ನೇಮಕಗೊಂಡಾಗ ನನ್ನ ಪೋಷಕರಿಗೆ ಆದ ಸಂತಸ ಅಷ್ಟಿಷ್ಟಲ್ಲ. ಮೊದಲಿಗೆ ಸ್ಪೇನಿನಲ್ಲಿ ವಿಮಾನ ಚಾಲನೆ ತರಬೇತಿ ಸಿಕ್ಕಿತು. ನಂತರ ಬೋಯಿಂಗ್ 737 ವಿಮಾನ ಚಾಲನೆ ಅವಕಾಶ ಸಿಕ್ಕಿತು.
ನಂತರ ಲಂಡನ್ನಿನಲ್ಲಿ ತರಬೇತಿ ಮುಂದುವರೆಸಿ ಬೋಯಿಂಗ್ 777ರ ಚಾಲನೆಯ ಮೊದಲ ಪಾಠಗಳನ್ನು ಕಲಿತೆ. ವಿಶ್ವದ ಮಹಿಳಾ ಪೈಲಟ್ ಗಳ ಪೈಕಿ ಶೇ 15ರಷ್ಟು ಭಾರತದ ಮಹಿಳೆಯರಿದ್ದಾರೆ. ಮಹಿಳೆಯರು ಪೈಲಟ್ ಗಳಾಗಿ ವೃತ್ತಿ ಕಂಡುಕೊಳ್ಳುವುದು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ದಿವ್ಯಾ ಹೆಮ್ಮೆಯಿಂದ ಹೇಳಿದರು.













Click it and Unblock the Notifications