ಕಮಲ ಹಾಸನ್ ಟೀಕೆಗೆ ಅರುಣ್ ಜೇಟ್ಲಿ ಖಡಕ್ ಉತ್ತರ
ನವದೆಹಲಿ, ಜೂನ್ 5: ''ಮಾಧ್ಯಮಗಳಲ್ಲಿ ಹುಯಿಲೆಬ್ಬಿಸುವುದರಿಂದ ಸರ್ಕಾರದ ನೀತಿಯ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ'' - ಇದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ತಮಿಳು ನಟ ಕಮಲ ಹಾಸನ್ ಅವರಿಗೆ ಹೇಳಿದ ಕಿವಿಮಾತು.
ಒಂದು ದೇಶ, ಒಂದು ತೆರಿಗೆ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ಜಾರಿಗೆಗೊಳ್ಳಲಿದೆ.[ಜಿಎಸ್ ಟಿ ಜಾರಿಯಾದ್ರೆ ಚಿತ್ರರಂಗಕ್ಕೆ ವಿದಾಯ: ಕಮಲ್ ಹಾಸನ್]

ಈ ಬಗ್ಗೆ ಕೆಲ ದಿನಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದ ಕಮಲ ಹಾಸನ್, ''ಚಿತ್ರರಂಗದ ಮೇಲೆ ಜಿಎಸ್ ಟಿಯಿಂದಾಗಿ ಶೇ. 28ರಷ್ಟು ತೆರಿಗೆ ಬೀಳುತ್ತದೆ. ಕೇಂದ್ರ ಸರ್ಕಾರ ಇದನ್ನು ತಕ್ಷಣವೇ ಪರಿಷ್ಕರಿಸಬೇಕು ಅಥವಾ ಜಿಎಸ್ ಟಿಯನ್ನು ಹಿಂಪಡೆಯಬೇಕು. ಇಲ್ಲವಾದರೆ, ನಾನು ಚಿತ್ರರಂಗಕ್ಕೇ ವಿದಾಯ ಹೇಳುತ್ತೇನೆ'' ಎಂದು ಕಿಡಿಕಾರಿದ್ದರು.
ಇದಕ್ಕೆ ಸೋಮವಾರ (ಜೂನ್ 5) ಉತ್ತರ ಕೊಟ್ಟಿರುವ ಜೇಟ್ಲಿ, ''ಜಿಎಸ್ ಟಿ ಸಾಧಕ-ಬಾಧಕಗಳೇನು ಎಂಬುದನ್ನು ನಾವು ಹೆಜ್ಜೆ ಹೆಜ್ಜೆಗೂ ಅವಲೋಕಿಸುತ್ತಿದ್ದೇವೆ. ಆದರೆ, ಹೀಗೆ ಮಾಧ್ಯಮಗಳನ್ನು ಬಳಸಿಕೊಂಡು ಸರ್ಕಾರದ ನಿಯಮಗಳ ವಿರುದ್ಧ ಹುಯಿಲೆಬ್ಬಿಸಿದರೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ'' ಎಂದು ಎಚ್ಚರಿಸಿದರು.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]
ಅಲ್ಲದೆ, ಈವೆರೆಗೆ ನಾನಾ ರಾಜ್ಯಗಳಿದ್ದ ವಿವಿಧ ಬಗೆಯ ಮನರಂಜನಾ ತೆರಿಗೆಗಳ ಒಟ್ಟು ಮೊತ್ತ ಶೇ. 29.1ರಷ್ಟಿತ್ತು. ಆದರೆ, ಜಿಎಸ್ ಟಿಯಿಂದಾಗಿ ಅದು ಶೇ. 28ಕ್ಕೆ ಇಳಿಯಲಿದೆ. ಶೇ. 1ರಷ್ಟು ತೆರಿಗೆ ಕಡಿಮೆಯೇ ಆಗಿದೆ. ಇದನ್ನರಿತು ಟೀಕೆ ಮಾಡಬೇಕು ಎಂದು ಅವರು ಕಮಲ್ ಗೆ ನೇರವಾಗಿ ತಿಳಿ ಹೇಳಿದರು.












Click it and Unblock the Notifications