Manipur Violance: ಮಣಿಪುರದಲ್ಲಿ ಕಮಾಂಡೋ ಕಾರ್ಯಾಚರಣೆ: 40 ಬಂಡುಕೋರರ ಹತ್ಯೆ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿದ್ದು ಕೆಲವೇ ಗಂಟೆಗಳಲ್ಲಿ 40 ಬಂಡುಕೋರರನ್ನು ಹತ್ಯೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಹೇಳಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಪ್ರದೇಶಗಳಲ್ಲಿ ಹೊಸದಾಗಿ ಘರ್ಷಣೆಗಳು ಆರಂಭವಾಗಿವೆ.
ಮೂರು ದಿನಗಳ ಭೇಟಿಗಾಗಿ ಕೇಂದ್ರ ಸಚಿವ ಅಮಿತ್ ಶಾ ಮೇ 29 ರಂದು ರಾಜ್ಯಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಮುಖ್ಯಮಂತ್ರಿ ಬಿರೇನ್ ಸಿಂಗ್ಅವರನ್ನು ಭೇಟಿಯಾಗಿ ಮಣಿಪುರದ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಸೇನೆಯು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿದರು.

ಭಾನುವಾರ ಮಣಿಪುರದಾದ್ಯಂತ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಶಸ್ತ್ರ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಿ ಸ್ಥಾಪಿಸುವ ಸಲುವಾಗಿ ಸೇನೆಯು ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಹಲವು ಕಡೆ ಘರ್ಷಣೆಗಳು ಆರಂಭವಾಗಿದೆ.
ಸಿಎಂ ಬಿರೇನ್ ಸಿಂಗ್ ಮಾಹಿತಿ
"ನಾಗರಿಕರ ವಿರುದ್ಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಈ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಸುಮಾರು 40 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಹಲವರನ್ನು ಬಂಧಿಸಲಾಗಿದೆ" ಎಂದು ಸಿಎಂ ಬಿರೇನ್ ಸಿಂಗ್ ತಿಳಿಸಿದ್ದಾರೆ.
"ಮಾಹಿತಿಯ ಪ್ರಕಾರ, ಕಾಕ್ಚಿಂಗ್‌ನ ಸುಗ್ನು, ಚುರಾಚಂದ್‌ಪುರದ ಕಾಂಗ್ವಿ, ಇಂಫಾಲ್ ಪಶ್ಚಿಮದ ಕಾಂಗ್‌ಚುಪ್, ಇಂಫಾಲ್ ಪೂರ್ವದ ಸಗೋಲ್ಮಾಂಗ್, ಬಿಷೆನ್‌ಪುರದ ನುಂಗೋಪೋಕ್ಪಿ, ಇಂಫಾಲ್ ಪಶ್ಚಿಮದ ಖುರ್ಖುಲ್ ಮತ್ತು ಕಾಂಗ್‌ಪೋಕ್ಪಿಯ ವೈಕೆಪಿಐನಿಂದ ಗುಂಡಿನ ದಾಳಿ ನಡೆದಿದೆ" ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕಾಕ್ಚಿಂಗ್ ಪೊಲೀಸ್ ಠಾಣೆ ಮೇಲೆ ಮೈತೆಯ್ ಗುಂಪಿನವರು ದಾಳಿ ಮಾಡಿದ್ದು, ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇನ್ನೂ ಖಚಿತವಾಗಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆ ವಿರುದ್ಧ ಪ್ರತಿಭಟಿಸಲು ಮೇ 3 ರಂದು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಆರಂಭವಾಗಿದೆ. ಮಣಿಪುರ ಹಿಂಸಾಚಾರದಲ್ಲಿ ಇದುವರೆಗೂ 75ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ.
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.











Click it and Unblock the Notifications