ಮಣಿಪುರದಲ್ಲಿ ತಣ್ಣಗಾಗಿಲ್ಲ ಹಿಂಸಾಚಾರ: ಮುಖ್ಯಮಂತ್ರಿ ಬೆಂಗಾವಲು ವಾಹನದ ಮೇಲೆ ದಾಳಿ
ಇಂಫಾಲಾ, ಜೂನ್. 10: ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಬೆಂಗಾವಲು ವಾಹನದ ಮೇಲೆ ಸೋಮವಾರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಉಗ್ರರು ಹೊಂಚುದಾಳಿ ನಡೆಸಿದ್ದು, ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ, ಬೆಂಗಾವಲು ಪಡೆ ಇಂಫಾಲ್‌ನಿಂದ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-37 ರ ಉದ್ದಕ್ಕೂ ಬೆಳಗ್ಗೆ 10.30 ರ ಸುಮಾರಿಗೆ ದಾಳಿ ನಡೆಸಿದೆ. ಜೂನ್ 6 ರಂದು ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಹತ್ಯೆಯಾಗಿದ್ದು, ಅಶಾಂತಿಯಿಂದ ನಲುಗಿರುವ ಜಿರಿಬಾಮ್‌ಗೆ ಭೇಟಿ ನೀಡಲು ಮುಖ್ಯಮಂತ್ರಿ ಪ್ಲ್ಯಾನ್ ಮಾಡಿದ್ದರು.

ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಮಂಗಳವಾರ ಈ ಪ್ರದೇಶಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಜಿರಿಬಾಮ್‌ನಲ್ಲಿನ ವ್ಯಕ್ತಿಯ ಹತ್ಯೆಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಇದರಿಂದಾಗಿ ಕೆಲವು ಸರ್ಕಾರಿ ಕಚೇರಿಗಳು ಸೇರಿದಂತೆ ಸುಮಾರು 70 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ನೂರಾರು ನಾಗರಿಕರು ತಮ್ಮ ಸ್ಥಳಗಳಿಂದ ಸುರಕ್ಷಿತ ಸ್ಥಳಗಳಿಗೆ ಓಡಿಹೋಗಬೇಕಾದ ಸ್ಥಿತಿ ಬಂದಿದೆ.
ಜಿರಿಬಾಮ್‌ನಲ್ಲಿ ಮೈತಿಯಿ ಸಮುದಾಯದ 59 ವರ್ಷದ ರೈತ ಕೊಲೆಯಾಗಿದ್ದಾರೆ. ಮೃತರನ್ನು ಸೋಯಬಮ್ ಶರತ್‌ಕುಮಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಜಮೀನಿನಿಂದ ಹಿಂದಿರುಗುತ್ತಿದ್ದಾಗ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮೃತದೇಹ ಸಿಕ್ಕಾಗ ದೇಹದ ಮೇಲೆಲ್ಲಾ ಚೂಪಾದ ವಸ್ತುವಿನಿಂದ ಉಂಟಾದ ಗಾಯಗಳಿವೆ.

ಈ ಘಟನೆಯು ಕಳೆದ ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಶುಕ್ರವಾರ (ಜೂನ್ 7) ಜಿರಿಬಾಮ್‌ನ ಬಾಹ್ಯ ಪ್ರದೇಶಗಳಿಂದ ಸುಮಾರು 239 ಮೈತಿಯಿ ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಬಹು-ಕ್ರೀಡಾ ಸಂಕೀರ್ಣದಲ್ಲಿ ಹೊಸದಾಗಿ ಸ್ಥಾಪಿಸಲಾದ ಪರಿಹಾರ ಶಿಬಿರಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತನ ಹತ್ಯೆಯ ಬಗ್ಗೆ ಕೋಪಗೊಂಡ ಸ್ಥಳೀಯರು, ಅಲ್ಲಿನ ಹಲವು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಇದಾದ ನಂತರ ಜಿರಿಬಾಮ್‌ನಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಿರುವ ಪರವಾನಗಿ ಪಡೆದ ಬಂದೂಕುಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಸ್ಥಳೀಯರು ಜಿರಿಬಾಮ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜಿರಿಬಾಮ್, ಮೈತೀಸ್, ಮುಸ್ಲಿಮರು, ನಾಗಾಗಳು, ಕುಕಿಗಳು ಮತ್ತು ಮಣಿಪುರಿಯೇತರರಿಗೆ ನೆಲೆಯಾಗಿದೆ. ಇಂಫಾಲ್ ಕಣಿವೆ ಮೂಲದ ಮೈತೀಸ್ ಮತ್ತು ಬೆಟ್ಟಗಳ ಮೂಲದ ಕುಕಿಗಳ ನಡುವಿನ ಸಂಘರ್ಷವು 200 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಮಣಿಪುರದ ಹಿಂಸಾಚಾರ ಪೀಡಿತ ಅಸ್ಸಾಂನ ಗಡಿಯಲ್ಲಿರುವ ಜಿರಿಬಾಮ್ ಜಿಲ್ಲೆಯಲ್ಲಿ ನೆಲೆಸಿರುವ ಕನಿಷ್ಠ 600 ಜನರು ಕಳೆದ ನಾಲ್ಕು ದಿನಗಳಲ್ಲಿ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಲಖಿಪುರ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕ್ಯಾಚಾರ್ ಪೊಲೀಸ್ ಅಧೀಕ್ಷಕ ನುಮಲ್ ಮಹತ್ತಾ ಹೇಳಿದ್ದಾರೆ.












Click it and Unblock the Notifications