Manipur: ಮಣಿಪುರ ಜನತೆಗೆ ಕ್ಷಮೆ ಕೇಳಿದ ಮುಖ್ಯಮಂತ್ರಿ ಬಿರೇನ್ ಸಿಂಗ್
ಜನಾಂಗೀಯ ಘರ್ಷಣೆಯಿಂದ ನಲುಗಿರುವ ಮಣಿಪುರ ಇನ್ನೂ ಸುಧಾರಿಸಿಕೊಂಡಿಲ್ಲ. ಒಂದೂವರೆ ವರ್ಷವಾದರೂ ರಾಜ್ಯದಲ್ಲಿ ಘರ್ಷಣೆ ನಡೆಯುತ್ತಲೇ ಇದೆ. 2025ರ ಹೊಸ ವರ್ಷಕ್ಕೆ ಮುನ್ನ ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಉಲ್ಲೇಖಿಸಿ ಅವರು ಕ್ಷಮೆ ಕೇಳಿದ್ದು 2025ರಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "2024 ಮಣಿಪುರಕ್ಕೆ ದುರದೃಷ್ಟಕರ ವರ್ಷವಾಗಿದೆ. ಕಳೆದ ವರ್ಷ ಮೇ 3ರಿಂದ ಇದುವರೆಗೆ ರಾಜ್ಯದಲ್ಲಿ ನಡೆದಿರುವ ಘಟನೆಗಳಿಗೆ ನಾನು ರಾಜ್ಯದ ಜನತೆಯ ಬಳಿ ಕ್ಷಮೆ ಕೇಳುತ್ತೇನೆ. ಅನೇಕ ಜನ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನ ತಮ್ಮ ಮನೆ ತೊರೆದಿದ್ದಾರೆ. ಈ ಬಗ್ಗೆ ನನಗೆ ತುಂಬಾ ವಿಷಾದವಿದೆ. ಇದಕ್ಕಾಗಿ ನಾನು ಜನರ ಬಳಿ ಕ್ಷಮೆ ಕೇಳುತ್ತೇನೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. 2025ರಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಸುತ್ತದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ" ಎಂದರು.

ರಾಜ್ಯದ ಜನತೆಗೆ ಮನವಿ
ರಾಜ್ಯದ ಎಲ್ಲಾ ಸಮುದಾಯದ ಜನತೆಗೆ ನಾನು ಮನವಿ ಮಾಡುತ್ತೇನೆ. ಹಿಂದೆ ನಡೆದಿರುವ ಎಲ್ಲಾ ಕಹಿ ಘಟನೆಗಳನ್ನು ಮರೆಯಬೇಕು, ತಪ್ಪುಗಳನ್ನು ಕ್ಷಮಿಸಬೇಕು. ಶಾಂತಿಯುತ ಮತ್ತು ಸಮೃದ್ಧ ಮಣಿಪುರ ನಿರ್ಮಾಣ ಮಾಡಲು ಹೊಸ ಜೀವನ ಪ್ರಾರಂಭಿಸಬೇಕು. ಮಣಿಪುರದ ಎಲ್ಲಾ 35 ಬುಡಕಟ್ಟು ಸಮುದಾಯದ ಜನತೆ ಸಾಮರಸ್ಯದಿಂದ ಬದುಕಬೇಕು ಎಂದು ಕರೆ ನೀಡಿದರು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಈವರೆಗೆ 180ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಮೈತಿ ಸಮುದಾಯ ಪರಿಶಿಷ್ಠ ಪಂಗಡದ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಕಿ ಬುಡಕಟ್ಟು ಸಮುದಾಯ ವಿರೋಧಿಸಿದ್ದು ಹಿಂಸಾಚಾರಕ್ಕೆ ಕಾರಣವಾಯಿತು.
ಮಣಿಪುರ ಜನಸಂಖ್ಯೆಯ 53 ಪ್ರತಿಶತ ಇರುವ ಮೈತೇಯಿ ಜನಾಂಗವು ಇಂಫಾಲ್ ಕಣಿವೆಯಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದೆ. ನಾಗಾ ಮತ್ತು ಕುಕಿಗಳು ಸೇರಿದಂತೆ ಪ್ರಮುಖ ಬುಡಕಟ್ಟು ಸಮುದಾಯಗಳ ಜನಸಂಖ್ಯೆ 40 ಪ್ರತಿಶತ ಇದ್ದು, ಮುಖ್ಯವಾಗಿ ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications