ದೇಹ ಗಟ್ಟಿಯಾಗಲು ನಾಣ್ಯ ನುಂಗಿದ ವ್ಯಕ್ತಿ: ವೈದ್ಯಲೋಕವನ್ನೇ ಬೆಚ್ಚಿ ಬೀಸಿದ ಘಟನೆ!
ದೆಹಲಿ ಫೆಬ್ರವರಿ 27: ದೆಹಲಿಯಲ್ಲಿ ವೈದ್ಯಲೋಕವೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ವ್ಯಕ್ತಿಯೊಬ್ಬರ ಕರುಳಿನಿಂದ 39 ನಾಣ್ಯಗಳು ಮತ್ತು 37 ಆಯಸ್ಕಾಂತಗಳನ್ನು ಹೊರತೆಗೆದಿದ್ದಾರೆ.
ವರದಿಯ ಪ್ರಕಾರ ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದಾನೆಂದು ತಿಳಿದು ಬಂದಿದೆ. ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ನುಂಗುವುದರಿಂದ ದೇಹದಲ್ಲಿ ಸತುವು ಉತ್ಪತ್ತಿಯಾಗುತ್ತದೆ ಎಂದು ಭಾವಿಸಿ ರೋಗಿ ಅದನ್ನು ನುಂಗಿದ್ದಾನೆ. ಅನಾರೋಗ್ಯದಿಂದ ವ್ಯಕ್ತಿ ಆಸ್ಪತ್ರೆಗೆ ದಾಖಲಾದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು 26 ವರ್ಷದ ರೋಗಿಯ ಹೊಟ್ಟೆಯಲ್ಲಿ ಒಂದಲ್ಲ 39 ನಾಣ್ಯಗಳು ಮತ್ತು 37 ಆಯಸ್ಕಾಂತಗಳನ್ನು ಪತ್ತೆ ಮಾಡಿದ್ದಾರೆ. ತಕ್ಷಣವೇ ತಡ ಮಾಡದೇ ವೈದ್ಯರು ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿ ನಾಣ್ಯ ಹಾಗೂ ಆಯಸ್ಕಾಂತಗಳನ್ನು ಹೊರತೆಗೆದಿದ್ದಾರೆ.
ರೋಗಿಯ ಕುಟುಂಬದವರ ಪ್ರಕಾರ, ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದು, ನಾಣ್ಯಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದನು. ಕಳೆದ 20 ದಿನಗಳಿಂದ ಪದೇ ಪದೇ ವಾಂತಿ, ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಏನನ್ನೂ ತಿನ್ನಲು ಸಹ ಸಾಧ್ಯವಾಗುತ್ತಿರಲಿಲ್ಲ. ನಂತರ ಕುಟುಂಬದವರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರೀಕ್ಷೆಯ ಬಳಿಕ ನಾಣ್ಯಗಳು ಮತ್ತು ಆಯಸ್ಕಾಂತಗಳು ಆತನ ಹೊಟ್ಟೆಯಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ. ಸದ್ಯ ರೋಗಿಯನ್ನು ಸರ್ ಗಂಗಾ ರಾಮ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ.
ಕಳೆದ ಕೆಲವು ವಾರಗಳಿಂದ ಅವರು ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ತಿನ್ನುತ್ತಿದ್ದರು ಎಂದು ರೋಗಿಯ ಸಂಬಂಧಿಕರು ಹೇಳಿದ್ದಾರೆ. ರೋಗಿಗೆ ಮನೋವೈದ್ಯಕೀಯ ಪ್ರಕರಣಕ್ಕೂ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದರು.

ಆರಂಭದಲ್ಲಿ ರೋಗಿಯ ಸಂಬಂಧಿಕರು ಅವನ ಹೊಟ್ಟೆಯ ಎಕ್ಸ್-ರೇ ಅನ್ನು ಮಾಡಿಸಿದರು. ಇದರಲ್ಲಿ ಅವನ ಹೊಟ್ಟೆಯಲ್ಲಿ ನಾಣ್ಯಗಳು ಮತ್ತು ಆಯಸ್ಕಾಂತಗಳು ಇರುವುದು ತಿಳಿದು ಬಂತು. ಹೊಟ್ಟೆಯ ಸಿಟಿ ಸ್ಕ್ಯಾನ್‌ನಲ್ಲಿ ನಾಣ್ಯಗಳು ಮತ್ತು ಆಯಸ್ಕಾಂತಗಳ ಹೊರೆಯು ಕರುಳಿನಲ್ಲಿ ಅಡಚಣೆಯನ್ನು ಉಂಟುಮಾಡುತ್ತಿದೆ ಎಂದು ತಿಳಿದುಬಂದಿದೆ. ರೋಗಿಗೆ ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಯಸ್ಕಾಂತ ಮತ್ತು ನಾಣ್ಯವು ಸಣ್ಣ ಕರುಳಿನಲ್ಲಿ ಎರಡು ಪ್ರತ್ಯೇಕ ಸ್ಥಳದಲ್ಲಿ ಇರುವುದನ್ನು ಕಂಡುಹಿಡಿಯಲಾಯಿತು. ಬಳಿಕ ಶಸ್ತ್ರಚಿಕಿತ್ಸೆಯಲ್ಲಿ ಕರುಳನ್ನು ತೆರೆದು ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ಹೊರತೆಗೆಯಲಾಯಿತು. ರೋಗಿಯ ಹೊಟ್ಟೆಯಿಂದ ಒಟ್ಟು 39 ನಾಣ್ಯಗಳು (₹1, 2, 5 ನಾಣ್ಯಗಳು) ಮತ್ತು 37 ಆಯಸ್ಕಾಂತಗಳು (ಹೃದಯ, ವೃತ್ತಾಕಾರ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರಗಳು) ಪತ್ತೆಯಾಗಿವೆ ಎಂದು ವೈದ್ಯ ಡಾ. ತರುಣ್ ಮಿತ್ತಲ್ ತಿಳಿಸಿದ್ದಾರೆ. ಏಳು ದಿನಗಳ ನಂತರ ಆರೋಗ್ಯಕರ ಸ್ಥಿತಿಯನ್ನು ತಿಳಿದು ಆತನನ್ನು ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ಹೇಳಿದರು.












Click it and Unblock the Notifications