ಬಸ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ, ತನ್ನದೇ ವೈರಲ್ ವಿಡಿಯೋ ನೋಡಿ ವ್ಯಕ್ತಿ ಆತ್ಮಹತ್ಯೆ
ಬಸ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕೇರಳದಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದಪುರಂ ನಿವಾಸಿಯಾದ 41 ವರ್ಷದ ದೀಪಕ್ ಅವರು ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳವನ್ನೇ ಬೆಚ್ಚಿಬೀಳಿಸಿದೆ.
ಬಸ್ಸಿನಲ್ಲಿ ಅಶ್ಲೀಲ ವರ್ತನೆ ನಡೆಸಿದ್ದಾರೆ ಎಂಬ ಆರೋಪದೊಂದಿಗೆ ಯೂಟ್ಯೂಬರ್‌ವೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ದೀಪಕ್ ಅವರ ಆಪ್ತ ಸ್ನೇಹಿತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ವೈರಲ್ ವಿಡಿಯೋ ಕುರಿತು ನಾನು ಮೊದಲ ಬಾರಿಗೆ ದೀಪಕ್‌ಗೆ ಮಾಹಿತಿ ನೀಡಿದೆ. ಅದನ್ನು ಕೇಳಿ ಅವರು ಸಂಪೂರ್ಣವಾಗಿ ಶಾಕ್‌ಗೆ ಒಳಗಾದ. ಇಂತಹ ಯಾವುದೇ ಘಟನೆ ನಡೆದಿದ್ದರೆ ಅವರಿಗೆ ಖಂಡಿತ ನೆನಪಿರುತ್ತಿತ್ತು. ಆದರೆ ಅವರು ತಾವು ನಿರಪರಾಧಿ ಎಂಬ ನಂಬಿಕೆಯಲ್ಲೇ ಇದ್ದರು ಎಂದಿದ್ದಾರೆ.

ಕಾನೂನು ಕ್ರಮಕ್ಕೆ ತೀರ್ಮಾನಿಸಿದ್ದ ದೀಪಕ್
ಶನಿವಾರ ರಾತ್ರಿ ದೀಪಕ್ ಮತ್ತು ಅಸ್ಗರ್ ನಡುವಿನ ಕೊನೆಯ ಸಂಭಾಷಣೆಯಲ್ಲಿ, "ಯೂಟ್ಯೂಬರ್ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಕೀಲರನ್ನು ಭೇಟಿ ಮಾಡಿ ದೂರು ದಾಖಲಿಸೋಣ" ಎಂದು ದೀಪಕ್ ಹೇಳಿದ್ದಾರೆಂದು ಸ್ನೇಹಿತ ಬಹಿರಂಗಪಡಿಸಿದ್ದಾರೆ. ಅಲ್ಲದೆ ತಾವು ತಪ್ಪು ಮಾಡಿಲ್ಲ ಎಂಬ ಆತ್ಮವಿಶ್ವಾಸ ದೀಪಕ್‌ಗೆ ಇತ್ತು. ಆರೋಪ ಮಾಡಿದ ಮಹಿಳೆ ವಿದೇಶಕ್ಕೆ ತೆರಳುವ ಮೊದಲು ಅವರನ್ನು ಬಂಧಿಸಬೇಕು ಎಂಬುದು ಅವರ ಆಶಯವಾಗಿತ್ತು ಎಂದಿದ್ದಾರೆ.
ಏನಿದು ಪ್ರಕರಣ?
ಭಾನುವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ದೀಪಕ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದಕ್ಕೂ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಬಸ್‌ನಲ್ಲಿ ದೀಪಕ್ ತಮ್ಮನ್ನು ಲೈಂಗಿಕ ಉದ್ದೇಶದಿಂದ ಮುಟ್ಟಿದ್ದಾರೆ ಎಂದು ಆರೋಪಿಸಿ ವಿಡಿಯೋ ಪೋಸ್ಟ್ ಮಾಡಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನು ನೋಡಿದ ಆಘಾತದಿಂದ ಅವರು ದೀಪಕ್ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ. ನಂತರ ಆ ಮಹಿಳೆ ಮೊದಲ ವಿಡಿಯೋವನ್ನು ಡಿಲೀಟ್ ಮಾಡಿ, ತಾನು ಅದನ್ನು ಏಕೆ ಹಂಚಿಕೊಂಡೆ ಎಂಬ ಬಗ್ಗೆ ಮತ್ತೊಂದು ಸ್ಪಷ್ಟೀಕರಣ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು.
ಈ ಆತ್ಮಹತ್ಯೆ ಬಳಿಕ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೀಪಕ್ ಕುಟುಂಬದವರು, ಸ್ನೇಹಿತರು ಮತ್ತು ಸಾಮಾಜಿಕ ಕಾರ್ಯಕರ್ತರು, ಸತ್ಯಾಸತ್ಯತೆ ಪರಿಶೀಲಿಸದೇ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ಮಾನ ಹರಣ ಮಾಡುವ ಪ್ರವೃತ್ತಿ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೀಪಕ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಈ ಸಾವಿಗೆ ಕಾರಣವಾದ ಎಲ್ಲ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥರಿಗೂ ಹಲವಾರು ದೂರುಗಳು ಸಲ್ಲಿಕೆಯಾಗಿವೆ.
ಪೊಲೀಸರು ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪ ಮಾಡಿದ ಮಹಿಳೆಯ ವಿರುದ್ಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮೇಲೆಯೂ ಸಾರ್ವಜನಿಕರಿಂದ ಒತ್ತಡ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ-ಪ್ರತ್ಯಾರೋಪಗಳ ಮಧ್ಯೆ ಒಬ್ಬ ವ್ಯಕ್ತಿ ಜೀವ ಕಳೆದುಕೊಂಡಿರುವ ಈ ಘಟನೆ, ಡಿಜಿಟಲ್ ಯುಗದಲ್ಲಿ ಹೊಣೆಗಾರಿಕೆಯಿಂದ ವರ್ತಿಸಬೇಕಾದ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತಿದೆ.
ಕೊಲೆಯಷ್ಟೇ ಕ್ರೂರ ಅಪರಾಧ!
ಈ ಪ್ರಕರಣದ ಬಗ್ಗೆ ಲೇಖಕ ಇಸ್ಮತ್ ಪಜೀರ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. "ನಮ್ಮ ಕೈಯಲ್ಲಿ ಮೊಬೈಲ್ ಇದೆಯೆಂದು ಯಾರದೇ ಮಾನ ಹರಾಜು ಹಾಕುವ ಹಕ್ಕು ನಮಗಿಲ್ಲ. ನಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದ್ದರೆ ಅಥವಾ ಇತರರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದ್ದರೆ ಸಾಕ್ಷಿಗಾಗಿ ಬೇಕಾದರೆ, ರೆಕಾರ್ಡ್ ಮಾಡಬಹುದಾದರೂ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿ ಯಾರದೇ ಜೀವಕ್ಕೆ ಎರವಾಗುವುದಾದರೆ ಅದು ಕೊಲೆಯಷ್ಟೇ ಕ್ರೂರ ಅಪರಾಧ. ಈ ದೇಶದಲ್ಲಿ ಪೋಲೀಸ್, ನ್ಯಾಯಾಂಗ ಎಲ್ಲವೂ ಇದೆ.ನಮ್ಮಲ್ಲಿರುವ ಸಾಕ್ಷ್ಯಗಳನ್ನು ಕಾನೂನು ಕ್ರಮಕ್ಕಾಗಿ ಬಳಸಬಹುದಷ್ಟೆ. ನಾವು ವೀಡಿಯೋ ವೈರಲ್ ಮಾಡಿ ಯಾರದ್ದೇ ಮಾನ ಹರಾಜು ಹಾಕುವುದರಿಂದ ನಮಗೆ ಖಂಡಿತಾ ನ್ಯಾಯ ಸಿಗದು".
"ಕೇರಳದ ಕಣ್ಣೂರಿನ ಶಂಜಿತಾ ಮುಸ್ತಫಾ ಎಂಬಾಕೆಯ ಕೃತ್ಯದಿಂದಾಗಿ ನಿಷ್ಪಾಪಿ ದೀಪಕ್ ಎಂಬ ಯುವಕನ ಬದುಕು ಅಂತ್ಯಗೊಂಡಿದೆ. ಆತನ ವೃದ್ಧ ತಂದೆ ತಾಯಿಗೆ ಆತ ಒಬ್ಬನೇ ಆಧಾರವಾಗಿದ್ದ. ಸದ್ರಿ ವೀಡಿಯೋ ಸರಿಯಾಗಿ ಗಮನಿಸಿದೆ. ಸಾಮಾನ್ಯವಾಗಿ ಲೈಂಗಿಕ ಕಿರುಕುಳಕ್ಕೊಳಗಾಗುವಾಗ ಆ ಹೆಣ್ಣಿನ ಮುಖದಲ್ಲಿ ಆತಂಕದ ಭಾವ ಕಾಣುತ್ತದೆ. ಆದರೆ ಶಂಜಿತಾ ಮುಸ್ತಫಾಳ ಮುಖದಲ್ಲಿ ವೀಡಿಯೋ ಮಾಡುವ ಹೊತ್ತಿಗೆ ತುಂಟತನ ಎದ್ದು ಕಾಣುತ್ತಿತ್ತು".
"ಆಕೆ ಯಾವುದೇ ಕಾರಣಕ್ಕೂ ಕಾನೂನು ಕ್ರಮದಿಂದ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಸಿಗದಂತೆ ನೋಡಿಕೊಳ್ಳಬೇಕಿದೆ.ಅದು ಮುಂದೆ ಪುಗ್ಸಟ್ಟೆ ಪಬ್ಲಿಸಿಟಿಗಾಗಿ ಯಾರದೇ ಬದುಕಿನೊಂದಿಗೆ ಚೆಲ್ಲಾಟವಾಡುವವರಿಗೆ ಪಾಠವಾಗಬೇಕಿದೆ. ಶಂಜಿತಾ ಮುಸ್ಲಿಮ್ ಯುವತಿಯಾದರೂ ಕೇರಳದ ಮುಸ್ಲಿಮರು ಮತ್ತು ಮುಸ್ಲಿಮ್ ಧರ್ಮಗುರುಗಳು ದೀಪಕ್ ಪರವಾಗಿ ಅರ್ಥಾತ್ ನ್ಯಾಯದ ಪರವಾಗಿ ನಿಂತಿದ್ದಾರೆ".
"ನ್ಯಾಯವು ಮುಸ್ಲಿಮೇತರನ ಕಡೆಗಿದ್ದರೂ ನ್ಯಾಯದ ಪರವಾಗಿ ನಿಲ್ಲಬೇಕು. ಅನ್ಯಾಯ ಎಸಗಿದವ/ಳು ಮುಸ್ಲಿಮ್ ಎಂದು ಅನ್ಯಾಯದ ಪರವಾಗಿ ನಿಲ್ಲುವುದು ಕೋಮುವಾದ. ಕೋಮುವಾದದ ಪರ ನಿಲ್ಲುವುದು, ಅದಕ್ಕಾಗಿ ಹೋರಾಡುವುದು ಮತ್ತು ಅದಕ್ಕಾಗಿ ಮಡಿಯುವುದು ಇವೆಲ್ಲವೂ ಹರಾಂ" ಎಂದು ಕಠಿಣ ಮಾತುಗಳಲ್ಲಿ ನನ್ನ ಪ್ರಾಣ ಪೈಗಂಬರ್ (ಸ) ಬೋಧಿಸಿದ್ದಾರೆ. ನ್ಯಾಯದ ಪರ ನಿಂತ ಎಲ್ಲರಿಗೂ ಒಳಿತಾಗಲಿ..ಶಂಜಿತಾ ಎಂಬ ತಪ್ಪಿತಸ್ಥೆಯನ್ನು ತಪ್ಪಿತಸ್ಥೆ ಎಂದಷ್ಟೇ ನೋಡೋಣ. ಮೃತ ದೀಪಕ್ ಸಾವಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳೋಣ. ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ.." ಎಂದು ಬರೆದುಕೊಂಡಿದ್ದಾರೆ.












Click it and Unblock the Notifications