ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ : ಆ ಮೆಗಾಸ್ಟಾರ್ ಯಾರು?
ತಿರುವನಂತಪುರಂ, ಜೂನ್ 21 : ಕರ್ನಾಟಕ ಉದ್ಯಮಿಯನ್ನು ಮದುವೆಯಾಗುತ್ತಿರುವ ಮಲಯಾಳಂ ನಟಿಯನ್ನು ಅಪಹರಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣದ ರೂವಾರಿ ಪಲ್ಸರ್ ಸುನಿ ಚಿತ್ರರಂಗದ ಹಲವು ಘಟಾನುಘಟಿಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ.
ಆ ಮೆಗಾಸ್ಟಾರ್ ತನ್ನನ್ನು ಬಾಡಿಗೆ ಪಡೆದು ಖ್ಯಾತ ಚಿತ್ರನಟಿಯನ್ನು ಅಪಹರಿಸಿ, ಆಕೆಯ ಮೇಲೆ ದೌರ್ಜನ್ಯವೆಸಗುವಂತೆ ಕುಮ್ಮಕ್ಕು ನೀಡಿದ್ದ ಎಂದು ಪಲ್ಸರ್ ಸುನಿ ಒಪ್ಪಿಕೊಂಡಿರುವುದು ಆ ಖ್ಯಾತ ನಟನನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಈ ಕೃತ್ಯದಲ್ಲಿ ನಿರ್ದೇಶಕನೊಬ್ಬನೂ ಭಾಗಿಯಾಗಿದ್ದಾನೆ ಎಂದು ಸುನಿ ತಿಳಿಸಿದ್ದಾನೆ.
ಈ ಹೇಳಿಕೆಯೊಂದಿಗೆ ಇಡೀ ದೇಶದ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದ ಹೈಪ್ರೊಫೈಲ್ ಪ್ರಕರಣಕ್ಕೆ ವಿಶಿಷ್ಟ ತಿರುವು ಸಿಕ್ಕಂತಾಗಿದೆ. ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಜಿನ್ಸೆ ಎಂಬ ಮತ್ತೊಬ್ಬ ಅಪರಾಧಿಯೆದಿರು ಆ ಖ್ಯಾತ ನಟ ಮತ್ತು ನಿರ್ದೇಶಕ ಭಾಗಿಯಾಗಿರುವುದರ ಬಗ್ಗೆ ಹೇಳಿದ್ದಾನೆ.
ಹಿಂದೆಯೂ ಕೂಡ ಆ ಖ್ಯಾತ ನಟನ ಹೆಸರು ಕೇಳಿಬಂದಿತ್ತಾದರೂ ಅವರು ಈ ಷಡ್ಯಂತ್ರದಲ್ಲಿ ತಾವು ಭಾಗಿಯಾಗಿರುವುದನ್ನು ಸಾರಾಸಗಟಾಗಿ ಅಲ್ಲಗಳೆದಿದ್ದರು. ಪ್ರಕರಣ ಸ್ವಲ್ಪ ತಣ್ಣಗಾಗುತ್ತಿದ್ದಂತೆ ನಟಿ ಬೆಂಗಳೂರಿನಲ್ಲಿ ತನ್ನ ಪ್ರಿಯತಮನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಮಲಯಾಳಂ ನಟಿಗೆ ಪಾಠ ಕಲಿಸುವ ಉದ್ದೇಶ
ಮತ್ತೊಬ್ಬ ನಟಿಯನ್ನು ಮದುವೆಯಾಗಿದ್ದ ಆ ನಟ, ದೌರ್ಜನ್ಯಕ್ಕೊಳಗಾಗಿದ್ದ ಮಲಯಾಳಂ ನಟಿಯೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯ ಹೊಂದಿದ್ದರು. ಈ ಕಾರಣದಿಂದಾಗಿ ಮಲಯಾಳಂ ನಟಿಗೆ ಪಾಠ ಕಲಿಸುವ ಉದ್ದೇಶದಿಂದ ಪಲ್ಸರ್ ಸುನಿಯನ್ನು ಬಾಡಿಗೆ ಪಡೆದು ಅತ್ಯಾಚಾರವೆಸಗುವಂತೆ ನೋಡಿಕೊಂಡಿದ್ದರು ಎಂಬುದು ಆರೋಪ.

ಅಪಹರಣದ ಯೋಜನೆ ಸಿದ್ಧಪಡಿಸಿದ್ದು ನಿರ್ದೇಶಕ
ಮಲಯಾಳಂ ನಟಿಯ ಅಪಹರಣವಾಗಿ ಆಕೆಯ ಮೇಲೆ ದೌರ್ಜನ್ಯ ನಡೆದ ದಿನ ಆಕೆಯ ಪ್ರಯಾಣದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು ಈ ಕುಖ್ಯಾತ ನಿರ್ದೇಶಕ. ಯೋಜನೆಗೆ ತಕ್ಕಂತೆ ಡ್ರೈವರ್ ಜೊತೆ ಗಾಡಿಯಲ್ಲಿ ಸಾಗುತ್ತಿದ್ದಾಗ ನಟಿಯ ಅಪಹರಣವಾಗಿ ಸಾಮೂಹಿಕವಾಗಿ ದೌರ್ಜನ್ಯ ನಡೆದಿತ್ತು. ವಾಹನದ ಚಾಲಕ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದ.

ಫೆಬ್ರವರಿ 17ರ ರಾತ್ರಿ ಆಗಿದ್ದೇನೆಂದರೆ
ಫೆಬ್ರವರಿ 17ರ ರಾತ್ರಿ ಆಗಿದ್ದೇನೆಂದರೆ, ಚಿತ್ರೀಕರಣ ಮುಗಿಸಿಕೊಂಡು ತನ್ನ ಕಾರು ಚಾಲಕನೊಂದಿಗೆ ಮಲಯಾಳಂ ನಟಿ ಮರಳುತ್ತಿದ್ದಾಗ, ಯೋಜನೆಯಂತೆ ಅವರ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ. ಜಗಳವಾಡುವ ನಾಟಕವಾಡಿ ಮಲಯಾಳಂ ನಟಿಯನ್ನು ಅಪಹರಿಸಲಾಗಿದೆ. ಆಗ ಚಲಿಸುತ್ತಿದ್ದ ಕಾರಿನಲ್ಲಿ ಮಲಯಾಳಂ ನಟಿಯ ಮೇಲೆ ಸತತ ಎರಡು ಗಂಟೆ ದೌರ್ಜನ್ಯ ನಡೆದಿತ್ತು.

ಅತ್ಯಾಚಾರವನ್ನು ಸೆರೆಹಿಡಿದಿದ್ದ ಸುನಿ
ಈ ಎಲ್ಲ ಹೀನ ಕೃತ್ಯವನ್ನು ಪಲ್ಸರ್ ಸುನಿ ತನ್ನ ಮೊಬೈಲಿನಲ್ಲಿ ಕೂಡ ಚಿತ್ರೀಕರಿಸಿಕೊಂಡಿದ್ದ. ಆ ಖ್ಯಾತ ನಟ ಹೇಳಿದಂತೆ ತಾನು ಮೊಬೈಲಿನಲ್ಲಿ ಎಲ್ಲವನ್ನೂ ಚಿತ್ರೀಕರಿಸಿಕೊಂಡಿರುವುದಾಗಿ ಹೇಳಿದ್ದ. ನಂತರ ಪೊಲೀಸರಿಗೆ ಸಿಗದಂತೆ ಆ ಮೊಬೈಲನ್ನು ಎಲ್ಲೋ ಎಸೆದುಬಿಟ್ಟಿದ್ದ. ಸುನಿ ಆ ಮೆಗಾತಾರೆಯ ಹೆಸರು ಹೇಳಿರುವುದರಿಂದ ಅವರನ್ನು ಪೊಲೀಸರು ವಿಚಾರಿಸುವ ಸಾಧ್ಯತೆಯಿದೆ.

ಖ್ಯಾತರ ಕೈವಾಡ, ಮಂಜು ವಾರಿಯರ್ ಆರೋಪ
ಆ ಮಲಯಾಳಂ ನಟಿಯ ಸ್ನೇಹಿತೆ ಮಂಜು ವಾರಿಯರ್ ಅವರು ನಟಿಯ ಅಪಹರಣ ಮತ್ತು ದೌರ್ಜನ್ಯದ ಹಿಂದೆ ಹಲವಾರು ಖ್ಯಾತನಾಮರ ಕೈವಾಡವಿದೆ ಎಂದು ಮಾಧ್ಯಮದ ಮುಂದೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಚಿತ್ರರಂಗದಲ್ಲಿ ನಟಿಯರ ಸುರಕ್ಷತೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು.












Click it and Unblock the Notifications