ಆಂತರಿಕ ಸಮಸ್ಯೆ ಉಲ್ಬಣವಾದ್ರೂ ಪಾಕ್ ತಂಟೆ ಬಿಟ್ಟಿಲ್ಲ
ನವದೆಹಲಿ/ಇಸ್ಲಮಾಬಾದ್, ಆ 23: ಆಂತರಿಕ ಸಮಸ್ಯೆಯಿಂದ ಹೈರಾಣವಾಗಿರುವ ಪಾಕಿಸ್ತಾನ, ಭಾರತದ ಜೊತೆಗಿನ ಉದ್ದಟತನವನ್ನು ಯಥಾಸ್ಥಿತಿ ಮುಂದುವರಿಸಿದೆ. ಜಮ್ಮು ಭಾಗದಲ್ಲಿ ಮತ್ತೆ ಶುಕ್ರವಾರ (ಆ 22) ಮತ್ತು ಶನಿವಾರ (ಆ23) ಪಾಕ್ ಪಡೆಗಳು ಭಾರತದ ಸೈನಿಕರ ಮೇಳೆ ಗುಂಡಿನ ದಾಳಿ ನಡೆಸಿವೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದರೂ, ಕಾಶ್ಮೀರ ಪ್ರತ್ಯೇಕವಾದಿಗಳ ಜೊತೆ ಮಾತುಕತೆ ನಡೆಸಿ ಮೋದಿ ನೀಡಿದ್ದ ಎಚ್ಚರಿಕೆಯನ್ನು ಪಾಕ್ ಕಡೆಗಣಿಸಿತ್ತು. ಅಲ್ಲದೇ, ಭಾರತದ ಎಚ್ಚರಿಕೆಗೆ ಡೋಂಟ್ ಕೇರ್ ಎಂದಿರುವ ಪಾಕಿಸ್ತಾನ, ಗಡಿಯಲ್ಲಿ ತನ್ನ ತಂಟೆಯನ್ನು ಮುಂದುವರಿಸಿ ಅಂತರಾಷ್ಟೀಯ ಮಟ್ಟದಲ್ಲಿ ತನ್ನ ಊಸರವಳ್ಳಿ ಬುದ್ದಿಯನ್ನು ಮುಂದುವರಿಸಿದೆ.
ಇನ್ನೊಂದೆಡೆ, ಪಾಕ್ ಪ್ರಧಾನಿ ನವಾಜ್ ಶರೀಫ್ ರಾಜೀನಾಮೆ ಆಗ್ರಹಿಸಿ ಪ್ರಮುಖ ಪ್ರತಿಪಕ್ಷದ ನಾಯಕ ಮತ್ತು ತೆಹ್ರೀಕ್ - ಇ- ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.
ಸರಕಾರ ಪರಿಪರಿಯಾಗಿ ಕೇಳಿಕೊಂಡರೂ ಇಮ್ರಾನ್ ತನ್ನ ಪ್ರತಿಭಟನೆಯನ್ನು ಕೈಬಿಡಲು ಸುತರಾಂ ಒಪ್ಪದೇ, ನವಾಜ್ ರಾಜೀನಾಮೆಗೆ ಪಟ್ಟುಹಿಡಿದು ಕೂತಿದ್ದು ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಖಡಾಖಂಡಿತ ಸಂದೇಶ ರವಾನಿಸಿದ್ದಾರೆ.
ಕಾಶ್ಮೀರ ಪ್ರತ್ಯೇಕವಾದಿಗಳ ಜೊತೆ ಮಾತುಕತೆ ನಡೆಸಿದರೆ, ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳುವುದಾಗಿ ಮೋದಿ ಸರಕಾರ ಎಚ್ಚರಿಕೆ ನೀಡಿದ್ದರೂ, ಪಾಕಿಸ್ತಾನದ ರಾಯಭಾರಿ ದೆಹಲಿಯಲ್ಲೇ ಆಗಸ್ಟ್ 19ರಂದು ಹುರಿಯತ್ ಕಾನ್ಫರೆನ್ಸ್ ಮುಖಂಡರ ಜೊತೆ ಮಾತುಕತೆ ನಡೆಸಿ, ಪಾಕ್ ತನ್ನ ನೈಜ ಬುದ್ದಿಯನ್ನು ತೋರಿಸಿತ್ತು.

ಶನಿವಾರ ಮತ್ತೆ ಗುಂಡಿನ ದಾಳಿ
ಶನಿವಾರ (ಆ 23) ಪಾಕಿಸ್ತಾನದ ಪಡೆಗಳು ಜಮ್ಮು ಭಾಗದ 22 ಗಡಿ ಔಟ್ ಪೋಸ್ಟುಗಳ ಮೇಲೆ ಮತ್ತು 13 ಹಳ್ಳಿಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್ ನಡೆಸಿದ ದಾಳಿಯಲ್ಲಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಬಿಎಸ್ಎಫ್ ಯೋಧ ಸೇರಿ ಇತರ ಐವರು ಗಾಯಗೊಂಡಿದ್ದಾರೆ. (ಚಿತ್ರ : ಪಿಟಿಐ)

ಗಡಿಯಲ್ಲಿ ಸ್ಥಳೀಯರ ಸ್ಥಳಾಂತರ
ಗಡಿ ಭಾಗದಲ್ಲಿ ನೆಲೆಸಿರುವ ಸುಮಾರು ಮೂರು ಸಾವಿರ ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ಪೂಂಚ್ ಭಾಗದ ಅರ್ಣಿಯಾ, ಆರ್ ಎಸ್ ಪುರ, ಹಮೀರ್ಪುರ ಭಾಗದಲ್ಲಿ ಪಾಕ್ ಪಡೆಗಳು ದಾಳಿ ನಡೆಸಿವೆ. ಬಿಎಸ್ಎಫ್ ಯೋಧರು ಪಾಕ್ ಪಡೆಗಳಿಗೆ ಪ್ರತ್ಯುತ್ತರ ನೀಡಿದೆ. ಶನಿವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಈ ಗುಂಡಿನ ಚಕಮಕಿ ನಡೆದಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. (ಚಿತ್ರ : ಪಿಟಿಐ)

2003ರ ನಂತರ ಇದೇ ಮೊದಲು
2003ರ ಗಡಿ ಒಪ್ಪಂದದ ನಂತರ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಪಾಕ್ ಗುಂಡಿನ ಚಕಮಕಿ ನಡೆಸಿದೆ. ಕಳೆದ ಕೆಲವು ತಿಂಗಳಲ್ಲಿ ಪಾಕ್ ಪಡೆಗಳಿಂದ ನಡೆಯುತ್ತಿರುವ 18ನೇ ಗಡಿ ಉಲ್ಲಂಘನೆ ಇದಾಗಿದೆ. (ಚಿತ್ರ : ಪಿಟಿಐ)

ಪಾಕ್ ಆಂತರಿಕ ಸಮಸ್ಯೆ ಉಲ್ಭಣ
ಪಾಕ್ ಪ್ರಧಾನಿ ನವಾಜ್ ಶರೀಫ್ ರಾಜೀನಾಮೆಗೆ ಒತ್ತಾಯಿಸಿ ಇಮ್ರಾನ್ ಖಾನ್ ಪಕ್ಷದ ಮೂವತ್ತಕ್ಕೂ ಹೆಚ್ಚು ಸಂಸದರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಸಂಸತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ತೆಹ್ರೀಕ್ - ಇ- ಇನ್ಸಾಫ್ ಪಕ್ಷದ ಸಂಸದರು ಶರೀಫ್ ಪದತ್ಯಾಗ ಮಾಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. (ಚಿತ್ರ : ಪಿಟಿಐ)

ನವಾಜ್ ಶರೀಫ್ ಗೆ ಸುಪ್ರೀಂ ಮುಖಭಂಗ
ಇಮ್ರಾನ್ ಖಾನ್ ಪಕ್ಷದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಶ್ನಿಸಿ ಪಾಕ್ ಸರಕಾರ ಸುರ್ಪೀಂಕೋರ್ಟ್ ಮೆಟ್ಟಲೇರಿತ್ತು. ಆದರೆ ನ್ಯಾಯಾಲಯ ಸರಕಾರದ ಅರ್ಜಿಯನ್ನು ತಿರಸ್ಕರಿಸಿದೆ. (ಚಿತ್ರ : ಪಿಟಿಐ)












Click it and Unblock the Notifications