Breaking: ಘೋರ ದುರಂತ, ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು ಹಲವರು ಸಾವು
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ರೈಲು ಅವಘಡದಲ್ಲಿ ಕನಿಷ್ಠ 8 ಪ್ರಯಾಣಿಕರ ಮೇಲೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದಿದೆ ಎಂದು ವರದಿಯಾಗಿದೆ. ಇವರೆಲ್ಲರೂ ಮತ್ತೊಂದು ಮಾರ್ಗದಲ್ಲಿ ಬರುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ಎನ್ನಲಾಗಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಅನುಮಾನದಲ್ಲಿ ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ.
ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭಯದಿಂದ ರೈಲಿನ ಚೈನ್ ಎಳೆದು ನಿಲ್ಲಿಸಿದ್ದರು. ಬಳಿಕ ರೈಲಿನಿಂದ ಕೆಳಗಿಳಿದು ಪಕ್ಕದ ಹಳಿ ಮೇಲೆ ನಿಂತು ಬೋಗಿಗಳನ್ನು ನೋಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ಹಳಿ ಮೇಲಿದ್ದವರ ಮೇಲೆ ಹರಿದು ಹೋಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮತ್ತೊಂದು ಮಾರ್ಗದಲ್ಲಿ ವೇಗವಾಗಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಕನಿಷ್ಠ 8 ಪ್ರಯಾಣಿಕರು ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಈ ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ರೈಲಿನ ರಭಸಕ್ಕೆ ಈವರೆಗೆ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. 30-40 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಧಾವಿಸಿದ್ದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಎಕ್ಸ್‌ಪ್ರೆಸ್ ಪಕ್ಕದ ಟ್ರ್ಯಾಕ್ ಮೂಲಕ ಹಾದು ಹೋಗುತ್ತಿದ್ದಾಗ ಪುಷ್ಪಕ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಅಪಘಾತಕ್ಕೀಡಾಗಿದ್ದಾರೆ. ಸದ್ಯ 8 ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳವನ್ನು ತಲುಪಿದ್ದು, ರೈಲ್ವೇ ಮತ್ತು ರೈಲ್ವೆ ಆಂಬ್ಯುಲೆನ್ಸ್‌ಗಳ ಹೆಚ್ಚುವರಿ ರಕ್ಷಣಾ ವ್ಯಾನ್‌ಗಳು ಸ್ಥಳಕ್ಕೆ ಧಾವಿಸುತ್ತಿವೆ. ಇಲ್ಲಿವರೆಗೆ 8 ಜನರು ಸಾವನ್ನಪ್ಪಿರುವ ಮಾಹಿತಿ ಇದ್ದು, ಸಾವಿನ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಸ್ಥಳದಲ್ಲೇ ಇದ್ದೇವೆ, ಹೆಚ್ಚುವರಿ ಎಸ್ಪಿ, ಎಸ್‌ಪಿ, ಕಲೆಕ್ಟರ್ ಹೀಗೆ ಎಲ್ಲರೂ ಘಟನಾ ಸ್ಥಳದತ್ತ ಬರುತ್ತಿದ್ದಾರೆ. ನಾವು ಡಿಆರ್‌ಎಂ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಪರಿಸ್ಥಿತಿ ನಿಯಂತ್ರಿಸುವ ಕೆಲಸ ನಡೆಯುತ್ತಿದೆ ಎಂದು ನಾಸಿಕ್ ವಿಭಾಗೀಯ ಆಯುಕ್ತ ಪ್ರವೀಣ್ ಗೆಡಮ್ ತಿಳಿಸಿದ್ದಾರೆ.
ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವದಂತಿ ಹಬ್ಬಿದ್ದರಿಂದ ಆ ಭಯಕ್ಕೆ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದರು. ಪಕ್ಕದ ಹಳಿ ಮೇಲೆ ನಿಂತು ರೈಲನ್ನು ಪರಿಶೀಲಿಸುತ್ತಿದ್ದಾಗ ವೇಗವಾಗಿ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ಪ್ರಯಾಣಿಕರ ಮೇಲೆ ಹರಿದು ಹೋಗಿದೆ. ಜಲಗಾಂವ್ ಮತ್ತು ಪಚೋರಾ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ವರದಿಗಳ ಪ್ರಕಾರ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಭಯ ಮೂಡಿಸಿತ್ತು. ಕೆಲವರು ತಮ್ಮ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಚಲಿಸುವ ರೈಲಿನಿಂದ ಜಿಗಿಯಲು ಕೂಡ ಯತ್ನಿಸಿದ್ದರು. ಕೊನೆಗೆ ಅವರು ಪಕ್ಕದ ಹಳಿಯಲ್ಲಿ ಇಳಿಯುತ್ತಿದ್ದಂತೆ, ಎದುರು ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ. ಬೆಂಕಿಯ ವದಂತಿಗೆ ಕಾರಣವಾದವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಈ ಸಂಬಂಧ ತನಿಖೆ ಕೂಡ ಶುರುವಾಗಿದೆ.












Click it and Unblock the Notifications