Maharashtra election: ಶಿವಸೇನೆ ನಾಯಕಿಗೆ 'ಹೊರಗಿನ ಮಾಲ್' ಎಂದ ಸಂಸದ!
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕಣ ರಂಗೇರಿದೆ. ಶಿವಸೇನೆಯಿಂದ ಕಣಕ್ಕಿಳಿದಿರುವ ಮಹಿಳಾ ಅಭ್ಯರ್ಥಿ ಶಾಯಿನಾ ಎನ್‌ಸಿ ಅವರ ಬಗ್ಗೆ ಸಂಸದರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಸದ ಅರವಿಂದ ಸಾವಂತ್, ಶಾಯಿನಾ ಅವರನ್ನು ಹೊರಗಿನ ಮಾಲ್ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಫ್ಯಾಷನ್ ಡಿಸೈನರ್ ಕೂಡ ಆಗಿರುವ ಶಾಯಿನಾ ಅವರು ಮೊದಲು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಏಕನಾಥ ಶಿಂಧೆ ಬಣದ ಶಿವಸೇನೆಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡು, ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸಂಸದ ಅರವಿಂದ ಸಾವಂತ್ ಅವರ ಹೇಳಿಕೆ ಬಗ್ಗೆ ಶಾಯಿನಾ ಎನ್‌ಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾನು ಮಾಲಲ್ಲ ಮಹಿಳೆ ಎಂದು ಕೌಂಟರ್ ನೀಡಿದ್ದಾರೆ.

ಸಾವಂತ್ ಹೇಳಿದ್ದೇನು?: ಶಾಯಿನಾ ಅವರ ಸ್ಥಿತಿ ನೋಡಿದರೆ ಬೇಸರವಾಗುತ್ತೆ. ಅವರ ಜೀವನ ಪೂರ್ತಿ ಬಿಜೆಪಿಯಲ್ಲೇ ಇದ್ದರು. ಈಗ ಶಿವಸೇನೆಗೆ ಹೋಗಿದ್ದಾರೆ. ಹಾಗಾಗಿ ಹೊರಗಿನಿಂದ ಬಂದಿರುವ ಮಾಲು ಇಲ್ಲಿ ಕೆಲಸ ಮಾಡುವುದಿಲ್ಲ. ಏನಿದ್ದರೂ ಇಲ್ಲೇ ಮೊದಲಿನಿಂದ ಇರುವ ಮಾಲು ಮಾತ್ರವೇ ಕೆಲಸ ಮಾಡುತ್ತೆ. ನಮ್ಮ ಪಕ್ಷದಲ್ಲಿ ಅಂತಹ ಮಾಲು ಈಗಾಗಲೇ ಇದೆ ಎಂದಿದ್ದರು.
ಇನ್ನು ಈ ವಿಚಾರ ವಿವಾದ ಸೃಷ್ಟಿಸಿದ್ದರಿಂದ ಸಾವಂತ್ ಮತ್ತೆ ತಮ್ಮ ಮಾತನ್ನು ಬೇರೆ ರೀತಿ ಅರ್ಥೈಸಿದ್ದಾರೆ. ಶಾಯಿನಾ ಅವರು ಈ ವಿಚಾರವಾಗಿ ಕಥೆ ಕಟ್ಟುತ್ತಿದ್ದಾರೆ. ನಾನು ಹೇಳಿದ್ದು ಅವರು ಆ ಕ್ಷೇತ್ರದಲ್ಲಿ ನೆಲೆಸಿಲ್ಲ ಎಂಬರ್ಥದಲ್ಲಿ ಎಂದಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ನಾನು ಮಹಿಳೆಯ ಘನತೆಗೆ ಯಾವತ್ತೂ ಧಕ್ಕೆ ತಂದವನಲ್ಲ. ಮಹಿಳೆಯರನ್ನು ನಾನು ಇಂದಿಗೂ ಗೌರವಿಸುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಾವಂತ್‌ಗೆ ಶಾಯಿನಾ ತಿರುಗೇಟು ನೀಡಿದ್ದಾರೆ. 2014 ಮತ್ತು 2019ರಲ್ಲಿ ನಾವು ಅರವಿಂದ ಸಾವಂತ್ ಪರ ಪ್ರಚಾರ ಮಾಡಿದ್ದೆ. ಈಗ ಮಹಿಳೆಯನ್ನು ಮಾಲು ಎನ್ನುವ ಮನಸ್ಥಿತಿ ನಿಮ್ಮದು. ಇದಕ್ಕೆ ತಕ್ಕ ಉತ್ತರವನ್ನು ಮತದಾರರೇ ಕೊಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಸಾವಂತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಯಿನಾ ಅವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆ ಬಿಜೆಪಿಯಲ್ಲಿದ್ದ ಶಾಯಿನಾ ಎನ್‌ಸಿ ಅವರು ಶಿವಸೇನೆಗೆ ಇತ್ತೀಚೆಗೆ ಸೇರ್ಪಡೆಯಾದರು. ಸಿಎಂ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಶಾಯಿನಾ ಶಿವಸೇನೆಗೆ ಸೇರಿಕೊಂಡಿದ್ದರು. ಈ ಚುನಾವಣೆಗೆ ಮುಂಬಾದೇವಿ ಕ್ಷೇತ್ರದ ಮಹಾಯುತಿ ಅಭ್ಯರ್ಥಿಯಾಗಿ ಶಾಯಿನಾ ಕಣಕ್ಕಿಳಿದಿದ್ದಾರೆ.
ಶಿವಸೇನೆ ಬಿಡುಗಡೆ ಮಾಡಿದ ಮತ್ತೊಂದು ಅಭ್ಯರ್ಥಿಗಳ ಪಟ್ಟಿಯಲ್ಲಿ ಶಾಯಿನಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದರು. ಶಿವಸೇನೆ ಸೇರಿದ ಬಳಿಕ ಪ್ರತಿಕ್ರಿಯಿಸಿದ್ದ ಅವರು, ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಹಾಯುತಿಯ ನಾಯಕತ್ವಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದರು. ನಾನು ಮುಂಬೈ ಜನರ ಆಶಯಗಳಿಗೆ ಬದ್ಧವಾಗಿರುತ್ತೇನೆ. ನಾನು ಕೇವಲ ಶಾಸಕಿಯಾಗಲು ಬಯಸುವುದಿಲ್ಲ, ನಾನು ಜನರ ಧ್ವನಿಯಾಗಲು ಬಯಸುತ್ತೇನೆ ಎಂದು ಶಾಯಿನಾ ಹೇಳಿದ್ದರು.












Click it and Unblock the Notifications