ವಿಜಯೋತ್ಸವದ ವೇಳೆ ಬೆಂಕಿ ಅವಘಡ, ಮಹಾರಾಷ್ಟ್ರದ ನೂತನ ಶಾಸಕ ಸೇರಿ 34 ಮಂದಿಗೆ ಗಾಯ!
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಿನ್ನೆ ತಡರಾತ್ರಿ ಮಹಾಗಾಂವ್‌ನಲ್ಲಿ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾಗ ಬೆಂಕಿ ಅವಘಡ ಸಂಭವಿಸಿದೆ. ಚಾಂದ್‌ಗಡ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಹೊಸದಾಗಿ ಆಯ್ಕೆಯಾದ ಸ್ವತಂತ್ರ ಶಾಸಕ ಶಿವಾಜಿ ಪಾಟೀಲ್ ಸೇರಿದಂತೆ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಚಾಂದ್‌ಗಡ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯಗೊಂಡು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಶಿವಾಜಿ ಪಾಟೀಲ್ 24,134 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳಿಕ ನಿನ್ನೆ ರಾತ್ರಿ ಫಲಿತಾಂಶ ಪ್ರಕಟವಾದ ನಂತರ ಅದ್ಧೂರಿ ಸಂಭ್ರಮಾಚರಣೆ ನಡೆಯಿತು.

ಈ ವೇಳೆ ಅವರ ಮೇಲೆ ಬುಲ್ಡೋಜರ್ ಮೂಲಕ ಗುಲಾಲ್ ಹೂವಿನ ಮಳೆಯನ್ನು ಸುರಿಸಲಾಯಿತು. ಗುಲಾಲ್ ನೆಲಕ್ಕೆ ತಾಗಿದ ಕೂಡಲೇ ಭಾರಿ ಬೆಂಕಿಯನ್ನು ಹೊತ್ತಿಕೊಂಡಿದೆ. ಆದರೆ ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ವೀಡಿಯೊದಲ್ಲಿ, ವಿಜಯೋತ್ಸವದ ಸಂದರ್ಭದಲ್ಲಿ ಹೊಸದಾಗಿ ಚುನಾಯಿತರಾದ ಶಾಸಕ ಶಿವಾಜಿ ಪಾಟೀಲ್ ಮತ್ತು ಅವರ ಬೆಂಬಲಿಗರ ಮೇಲೆ ಬೆಂಕಿ ಹೊತ್ತಿಕೊಂಡಿರುವುದು ಸೆರೆಯಾಗಿದೆ.
ಮಹಾಗಾಂವ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಹಿಳೆಯರು ಅವರ ಆರತಿ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಥಾಲಿಯ ಮೇಲೆ ದೊಡ್ಡ ಪ್ರಮಾಣದ ಗುಲಾಲ್ ಸುರಿದು ಬೆಂಕಿ ಹೊತ್ತಿಕೊಂಡಿತು. ಈ ಘಟನೆಯಲ್ಲಿ ಹಲವಾರು ಮಹಿಳೆಯರೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಟೀಲ್ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಜೇಶ್ ಪಾಟೀಲ್ ಅವರನ್ನು 24,134 ಮತಗಳಿಂದ ಸೋಲಿಸಿದ್ದಾರೆ. ಚಾಂದ್‌ಗಡ ಕ್ಷೇತ್ರವು ಕೊಲ್ಲಾಪುರ ಲೋಕಸಭಾ ಕ್ಷೇತ್ರದ ಭಾಗವಾಗಿದೆ, ಇದರಲ್ಲಿ ರಾಧಾನಗರಿ, ಕಾಗಲ್, ಕೊಲ್ಲಾಪುರ ದಕ್ಷಿಣ, ಕಾರ್ವಿರ್ ಮತ್ತು ಕೊಲ್ಲಾಪುರ ಉತ್ತರ ಐದು ಇತರ ಅಸೆಂಬ್ಲಿ ಕ್ಷೇತ್ರಗಳು ಸೇರಿವೆ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ರಾಜೇಶ್ ಪಾಟೀಲ್ ಅವರು ಗೆದ್ದಿದ್ದರು.
Newly Elected Independent candidate Shivaji Patil who won from Chandgad Assembly constituency,was injured in a fire during his victory celebrations.
— Indrajeet chaubey (@indrajeet8080) November 24, 2024
Some women who were in the procession have also been injured#chandgad#Kolhapur #MaharashtraElection2024 pic.twitter.com/jTpZZQneot
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡು ಅಂತಿಮವಾಗಿ 288 ಕ್ಷೇತ್ರಗಳ ಫಲಿತಾಂಶವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ಆಡಳಿತಾರೂಢ ಬಿಜೆಪಿ ಪಕ್ಷವು ಈ ಬಾರಿ ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದು ಬರೋಬ್ಬರಿ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಶಿವಸೇನೆ ಶಿಂಧೆ ಬಣ 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎನ್‌ಸಿಪಿ 41 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) 20 ಕ್ಷೇತ್ರಗಳಲ್ಲಿ ಗೆದ್ದಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 16 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCPSP) 10, ಸಮಾಜವಾದಿ ಪಕ್ಷ 2, ಜನ ಸುರಾಜ್ಯ ಶಕ್ತಿ 2, ರಾಷ್ಟ್ರೀಯ ಯುವ ಸ್ವಾಭಿಮಾನ್ ಪಾರ್ಟಿ 1, ರಾಷ್ಟ್ರೀಯ ಸಮಾಜ ಪಕ್ಷ 1, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) 1, ಸಿಪಿಐ(ಎಂ), PWPI, ರಾಜರ್ಷಿ ಶಾಹು ವಿಕಾಸ್ ಅಘಾಡಿ ಹಾಗೂ ಇತರೆ ಸ್ವತಂತ್ರ ಪಕ್ಷಗಳು ತಲಾ ಒಂದು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿವೆ.












Click it and Unblock the Notifications