ಮಹಾರಾಷ್ಟ್ರ: ಶೆಡ್ ಮೇಲೆ ಬಿದ್ದ ಬೃಹತ್ ಮರ: 7 ಸಾವು, ಅವಶೇಷಗಳ ಅಡಿ ಸಿಲುಗಿದ 35 ಜನ
ಅಕೋಲಾ ಏಪ್ರಿಲ್ 10: ಮಹಾರಾಷ್ಟ್ರದ ಅಕೋಲಾದಲ್ಲಿ ಭಾನುವಾರ ಟಿನ್ ಶೆಡ್‌ನ ಮೇಲೆ ಬೃಹತ್ ಮರವೊಂದು ಬಿದ್ದು ಏಳು ಜನರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. 29 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ರಾತ್ರಿ 7 ಗಂಟೆ ಸುಮಾರಿಗೆ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಹಳೆಯ ಬೇವಿನ ಮರವೊಂದು ತಗಡಿನ ಶೆಡ್‌ನ ಮೇಲೆ ಬಿದ್ದಿದೆ.
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ತಡರಾತ್ರಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಭಾರೀ ಹಾನಿಯಾಗಿದೆ. ಬಾಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾರಸ್ ಗ್ರಾಮದ ಬಾಬೂಜಿ ಮಹಾರಾಜ ದೇವಸ್ಥಾನದ ತಗಡಿನ ಶೆಡ್ ಮೇಲೆ ಮರ ಬಿದ್ದಿದೆ.

ಮರದ ಅಡಿಯಲ್ಲಿ ಹಲವಾರು ಭಕ್ತರು ಆಶ್ರಯ ಪಡೆಯುತ್ತಿದ್ದರು. ಪೋಲೀಸರ ಪ್ರಕಾರ, 35 ರಿಂದ 40 ಜನರು ಶೆಡ್ ಅಡಿಯಲ್ಲಿ ಹೂತುಹೋಗಿದ್ದಾರೆ. ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಐವರನ್ನು ಅಕೋಲಾ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಕ್ಕೆ ತುರ್ತು ಸೇವೆಗಳನ್ನು ಒದಗಿಸುವಲ್ಲಿ ಸೂಚನೆ ನೀಡಿದರು. ಮರದ ಕಾಂಡ ಮತ್ತು ಕುಸಿದ ಶೆಡ್ ಅನ್ನು ಮೇಲೆತ್ತಲು ಜೆಸಿಬಿ ಯಂತ್ರಗಳನ್ನು ತರಲಾಗಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾವಿಗೆ ಸಂತಾಪ ಸೂಚಿಸಿದ್ದು, ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದೆ ಎಂದು ಘೋಷಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಾಲಾಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಜುಮ್ಲೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಅಪರಾಧ ಘಟನಾ ಸ್ಥಳಕ್ಕೆ ತಲುಪಿ ಸ್ಥಳೀಯ ನಾಗರಿಕರ ಸಹಾಯದಿಂದ ಜನರನ್ನು ರಕ್ಷಿಸಿದರು. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಇದುವರೆಗೆ 20 ಮಂದಿಯನ್ನು ಹೊರ ತೆಗೆಯಲಾಗಿದೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಜನರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಧುಕ್ಕಿತರಾಗಿರುವ ಫೋಟೋಗಳು ಹರಿದಾಡುತ್ತಿವೆ.
"ಅಕೋಲಾ ಜಿಲ್ಲೆಯ ಪರಾಸ್‌ನಲ್ಲಿ ಧಾರ್ಮಿಕ ಸಮಾರಂಭಕ್ಕಾಗಿ ಕೆಲವರು ಸೇರಿದ್ದ ವೇಳೆ ಟಿನ್ ಶೆಡ್‌ನ ಮೇಲೆ ಮರ ಬಿದ್ದು ಕೆಲವು ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡುವುದು ನೋವಿನ ಸಂಗತಿಯಾಗಿದೆ. ಅವರಿಗೆ ನನ್ನ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ" ಎಂದು ಫಡ್ನವಿಸ್ ಸುದ್ದಿ ಸಂಸ್ಥೆ ANIಗೆ ಹೇಳಿದ್ದಾರೆ.
"ಕಲೆಕ್ಟರ್ ಮತ್ತು ಪೊಲೀಸ್ ಅಧೀಕ್ಷಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಮನ್ವಯಗೊಳಿಸುತ್ತಿದ್ದಾರೆ. ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ" ಎಂದು ಅವರು ಹೇಳಿದರು.
ಕೆಲ ಗಾಯಾಳುಗಳನ್ನು ಜಿಲ್ಲಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣ ಪುಟ್ಟ ಗಾಯಾಳುಗಳಿಗೆ ಬಾಳಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಧರಿಸಿದ್ದಾರೆ.
ಮತ್ತೊಂದು ಘಟನೆ
ಅದೇ ವೇಳೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಭಾನುವಾರ ಮುಂಜಾನೆ ಎರಡು ಗೋದಾಮುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸತಿವಲಿಯ ಮೌರ್ಯ ನಾಕಾದಲ್ಲಿ ಮುಂಜಾನೆ 1:30 ಕ್ಕೆ ಸಂಭವಿಸಿದ ಬೆಂಕಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬೆಂಕಿಯನ್ನು 5:30ಕ್ಕೆ ನಿಯಂತ್ರಣಕ್ಕೆ ತರಲಾಯಿತು ಎಂದು ವಸೈ ವಿರಾರ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications