Maharashtra: ಮಹಾರಾಷ್ಟ್ರ ಹೈಡ್ರಾಮಾ ಅಂತ್ಯ: ದೇವೇಂದ್ರ ಫಡ್ನವಿಸ್ ಸಿಎಂ, ಇಬ್ಬರು ಡಿಸಿಎಂ, ಹುದ್ದೆ ಅದಲು - ಬದಲು!
ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಪ್ರಕಟವಾಗಿ ಎರಡು ವಾರಗಳಾಗಿದ್ದು, ಎಲ್ಲಾ ಗೊಂದಲ ಹಾಗೂ ಅನುಮಾನಗಳಿಗೆ ಅಂತಿಮವಾಗಿ ಗುರುವಾರ ತೆರೆಬಿದ್ದಿದೆ. ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಅಂತ್ಯವಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಅಜಿತ್ ಪವಾರ್ ಹಾಗೂ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸುವುದು ಅಂತಿಮವಾಗಿದೆ. ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದಲ್ಲಿ ಯಾರು ಸಿಎಂ ಆಗಲಿದ್ದಾರೆ ಹಾಗೂ ಡಿಸಿಎಂ ಯಾರು ಎನ್ನುವ ಅನುಮಾನ ಇತ್ತು.
ಮಹಾರಾಷ್ಟ್ರದಲ್ಲಿ ಇದೀಗ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕಳೆದ ಎರಡೂವರೆ ವರ್ಷಗಳಿಂದ ಇದೇ ಮೈತ್ರಿಕೂಟ ಅಧಿಕಾರದಲ್ಲಿ ಇದೆ. ಆದರೆ, ಈ ಬಾರಿ ಅಧಿಕಾರ ಹಂಚಿಕೆಯಲ್ಲಿ ಹಲವು ಬದಲಾವಣೆಗಳು ಆಗಿವೆ. ಕಳೆದ ಬಾರಿ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದವರು ಈ ಬಾರಿ ಮುಖ್ಯಮಂತ್ರಿಯಾಗಿದ್ದು, ಮುಖ್ಯಮಂತ್ರಿಯಾಗಿದ್ದವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಹೌದು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ (ಶಿವಸೇನೆ ಏಕನಾಥ್ ಶಿಂಧೆ ಬಣ) ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದರು ಅವರು ಇದೀಗ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಅವರು ಇದೀಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಆದರೆ, ಅಜಿತ್ ಪವಾರ್ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ - ಅಜಿತ್ ಪವಾರ್ ) ಅವರು ಮಾತ್ರ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಜಿತ್ ಪವಾರ್ ಅವರು ಕಳೆದ ಬಾರಿಯೂ ಉಪ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯೂ ಉಪ ಮುಖ್ಯಮಂತ್ರಿಯಾಗಿ ಅವರು ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದಲ್ಲಿ ಈ ಬಾರಿಯೂ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ.
ಕೊನೆಯ ಕ್ಷಣದಲ್ಲಿ ನಡುಗಿಸಿದ್ದ ಏಕನಾಥ್ ಶಿಂಧೆ: ಮಹಾರಾಷ್ಟ್ರದಲ್ಲಿ ಈ ಬಾರಿ ಮಹಾಯುತಿ ಮೈತ್ರಿಕೂಟವು ಅಮೋಘ ಗೆಲುವು ದಾಖಲಿಸಿದೆ. ಆದರೆ, ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳ ನಡುವೆ ಅಧಿಕಾರ ಹಂಚಿಕೆಯಲ್ಲಿ ಉಂಟಾದ ಗೊಂದಲದಿಂದಾಗಿ ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಿದ್ದರೂ ಇಂದು ಡಿಸೆಂಬರ್ 5ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ.
ಈ ಪ್ರಕ್ರಿಯೆ ಇಷ್ಟೊಂದು ಸುದೀರ್ಘ ಸಮಯ ತೆಗೆದುಕೊಳ್ಳುವುದಕ್ಕೆ ಏಕನಾಥ್ ಶಿಂಧೆ ಅವರೇ ಪ್ರಮುಖ ಕಾರಣ. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ದ್ವಿಗ್ವಿಜಯ ಸಾಧಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ದೇವೇಂದ್ರ ಫಡ್ನವಿಸ್ ಅವರ ಹೆಸರನ್ನು ಅಂತಿಮ ಮಾಡುವುದಾಗಿ ಬಿಜೆಪಿ ಸ್ಪಷ್ಟಪಡಿಸಿತ್ತು.
ಆದರೆ, ಬಿಜೆಪಿ ನಿರ್ಧಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುತ್ತಿದ್ದ ಏಕನಾಥ್ ಶಿಂಧೆ ಅವರು ನಡು ನಡುವೆ ಟ್ವಿಸ್ಟ್ ಕೊಡುತ್ತಿದ್ದರು. ಇದು ಅಧಿಕಾರ ಹಂಚಿಕೆ ಹಾಗೂ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುವುದಕ್ಕೆ ವಿಳಂಬವಾಗಲು ಕಾರಣವಾಯಿತು.
ಅಲ್ಲದೇ ಪ್ರಮಾಣ ವಚನ ಸ್ವೀಕಾರಕ್ಕೆ ಎರಡು ಮೂರು ದಿನ ಬಾಕಿ ಉಳಿದಿರುವಾಗ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಜನ ನನ್ನನ್ನು ಮತ್ತೆ ಸಿ.ಎಂ ಕುರ್ಚಿಯಲ್ಲಿ ನೋಡಲು ಬಯಸುತ್ತಿದ್ದಾರೆ. ನಾನು ಕಾಮನ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದೆ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದರು.
ಅಲ್ಲದೇ ಶಿವಸೇನಾ (ಏಕನಾಥ್ ಶಿಂಧೆ ಬಣ)ಕ್ಕೆ ಪ್ರಮುಖ ಸಚಿವ ಸ್ಥಾನಗಳನ್ನು ಕೊಡಬೇಕು ಎಂದು ಸಹ ಡಿಮ್ಯಾಂಡ್ ಮಾಡಿದ್ದರು. ಅಧಿಕಾರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಬೇಕಾಯಿತು. ಅಂತಿಮವಾಗಿ ಎಲ್ಲಾ ರಾಜಕೀಯ ಹೈಡ್ರಾಮಾಗಳಿಗೂ ತೆರೆಬಿದ್ದಂತಾಗಿದೆ.












Click it and Unblock the Notifications