Maharashtra Elections: ಶಿವಸೇನೆ ಸೇರಿಕೊಂಡ ಬಿಜೆಪಿ ನಾಯಕಿ ಶೈನಾ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆ ಬಿಜೆಪಿ ನಾಯಕಿ ಶೈನಾ ಎನ್‌ಸಿ ಅವರು ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಸಿಎಂ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಶೈನಾ ಶಿವಸೇನೆಗೆ ಸೇರಿಕೊಂಡಿದ್ದಾರೆ. ಅಲ್ಲದೆ ಮುಂಬಾದೇವಿ ಕ್ಷೇತ್ರದ ಮಹಾಯುತಿ ಅಭ್ಯರ್ಥಿಯಾಗಿ ಶೈನಾ ಕಣಕ್ಕಿಳಿದಿದ್ದಾರೆ.
ನಿನ್ನೆ ಶಿವಸೇನೆ ಬಿಡುಗಡೆ ಮಾಡಿದ ಮತ್ತೊಂದು ಪಟ್ಟಿಯಲ್ಲಿ ಶೈನಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಹಾಯುತಿಯ ನಾಯಕತ್ವಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಶೈನಾ ಹೇಳಿದ್ದಾರೆ.

ಇದು ನನ್ನ ಮುಂಬೈ ಜನರಿಗೆ ಸೇವೆ ಸಲ್ಲಿಸಲು ಹಾಗೂ ಪ್ರತಿ ಕ್ಷೇತ್ರದಲ್ಲೂ ನಾವು ಪ್ರಧಾನ ಸೇವಕರಾಗಿ ಇದ್ದೇವೆ ಎಂಬುದನ್ನು ತೋರಿಸಲು ಇದೊಂದು ಒಳ್ಳೆಯ ಅವಕಾಶ ಎಂದು ನಾನು ನಂಬುತ್ತೇನೆ. ನಾನು ದಕ್ಷಿಣ ಮುಂಬೈನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿನ ಕ್ಲಸ್ಟರ್ ಅಭಿವೃದ್ಧಿ, ಸ್ಥಳೀಯ ನೈರ್ಮಲ್ಯ ಸೇರಿದಂತೆ ನಾಗರಿಕರು ಎದುರಿಸುವ ಸವಾಲುಗಳನ್ನು ನಾನು ಅರಿತುಕೊಂಡಿದ್ದೇನೆ ಎಂದಿದ್ದಾರೆ.
ನಾನು ಮುಂಬೈ ಜನರ ಆಶಯಗಳಿಗೆ ಬದ್ಧನಾಗಿರುತ್ತೇನೆ. ಯಾವ ಅಭ್ಯರ್ಥಿಯನ್ನು ಎಲ್ಲಿಂದ ಕಣಕ್ಕಿಳಿಸಬೇಕು ಎಂಬುದನ್ನು ಮಹಾಯುತಿ ನಾಯಕತ್ವವೇ ನಿರ್ಧರಿಸುತ್ತದೆ. ನಾನು ಕೇವಲ ಶಾಸಕಿಯಾಗಲು ಬಯಸುವುದಿಲ್ಲ, ನಾನು ಜನರ ಧ್ವನಿಯಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಉತ್ತಮ ಸಾರ್ವಜನಿಕ ಸೇವೆಯ ವಿಷಯದಲ್ಲಿ ಆಡಳಿತ ಮತ್ತು ನಾಗರಿಕರ ಸಾಮೂಹಿಕ ಪ್ರಜ್ಞೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ನಾನು ಯಾವುದೇ ಪಿಎ (ಪರ್ಸನಲ್ ಸೆಕ್ರೇಟರಿ) ಹೊಂದಿಲ್ಲ. ನನ್ನ ಎಲ್ಲ ಕರೆಗಳಿಗೆ ನಾನೇ ಉತ್ತರಿಸುತ್ತೇನೆ. ನನ್ನ ಕ್ಷೇತ್ರದ ಜನರಿಗೆ ಮತ್ತು ಮತದಾರರು ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪಿಸಿದ್ದು, ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಅವರು ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರದಿಂದ ನಿನ್ನೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಥಾಣೆಯಲ್ಲಿರುವ ಅವರ ನಿವಾಸದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಥಾಣೆ ಯಾವಾಗಲೂ ಕೇಸರಿ ಬಣ್ಣದ್ದು, ಅದು ಒಂದೇ ಆಗಿರುತ್ತೆ. ಸಿಎಂ ಏಕನಾಥ್ ಶಿಂಧೆ ನಾಮಪತ್ರ ಸಲ್ಲಿಸಿದರು. ಅವರು ಈ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆಲ್ಲುತ್ತಾರೆ ಜೊತೆಗೆ ತಮ್ಮದೇ ದಾಖಲೆಯನ್ನು ಮುರಿಯುತ್ತಾರೆ. ಥಾಣೆ ಜನರು ಮಹಾಯುತಿ ಜೊತೆಗೆ ಇರುತ್ತಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯು ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆಗೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ. ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದು, ಎಲ್ಲ 288 ಕ್ಷೇತ್ರಗಳಿಗೆ ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44. 2014ರಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು.












Click it and Unblock the Notifications